ಮಂಗಳೂರು: ನಗರದ ದಕ್ಕೆಯಲ್ಲಿ ಹಲವರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಕಾಲ ವ್ಯವಹಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಗಳೂರು ದಕ್ಕೆ ಹಸಿ ಮೀನು ವ್ಯಾಪಾರಸ್ಥರು ಮತ್ತು ಕಮಿಷನ್ ಏಜೆಂಟ್ ಸಂಘದ ಕಾರ್ಯಾಧ್ಯಕ್ಷ ಕೆ.ಅಶ್ರಫ್ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ದಕ್ಕೆಯಲ್ಲಿ ಕೆಲವು ದಿನಗಳಿಂದ ಹಲವು ವರ್ತಕರು ಹಾಗೂ ಇತರರಿಗೆ ಜ್ವರ, ನೆಗಡಿ, ಶೀತ ಮುಂತಾದ ಸೋಂಕಿನ ಲಕ್ಷಣಗಳು ಕಂಡು ಬಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ದಕ್ಕೆಯಲ್ಲಿ ನಡೆಯುವ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಇಂದಿನಿಂದ ಮುಂದಿನ 10 ದಿನಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ದಕ್ಕೆಯಲ್ಲಿ ನಡೆಯುವ ರಖಂ ಮೀನಿನ ವ್ಯಾಪಾರವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದ್ದರೂ ಕೆಲವರು ಅನಧಿಕೃತವಾಗಿ ವ್ಯಾಪಾರ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ದಕ್ಕೆಯಲ್ಲಿ ಹಾಗೂ ದಕ್ಕೆಯ ಆಸುಪಾಸಿನಲ್ಲಿರುವ ಉಳ್ಳಾಲ ಕೋಟೆಪುರ, ಹೊಯ್ಗೆಬಝಾರ್, ಬೆಂಗ್ರೆ, ಪರಂಗಿಪೇಟೆ, ವಿಆರ್ ಎಲ್ ಸಮೀಪ, ಕುದ್ರೋಳಿ, ಕಲ್ಲಾಪು ಹಾಗೂ ಮಾರಿಪಳ್ಳ ಮುಂತಾದ ಕಡೆಗಳಲ್ಲಿನಡೆಯುವ ಎಲ್ಲಾ ಮೀನಿನ ವ್ಯಾಪಾರ ವಹಿವಾಟನ್ನು 10 ದಿನಗಳ ಕಾಲ ನಿಷೇಧಿಸುವಂತೆ ಕೆ.ಅಶ್ರಫ್ ಜಿಲ್ಲಾಧಿಕಾರಿಯವರಿಗೆ ಬರೆದಿರುವ ಮನವಿಯಲ್ಲಿ ತಿಳಿಸಿದ್ದಾರೆ.