ಮಂಗಳೂರು : ಹೊರಗುತ್ತಿಗೆ ಸಿಬ್ಬಂದಿ ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತ ಮನ್ಸೂರ್ ಅಲಿಯವರು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ಆಕೆ ಸರಿಯಾಗಿ ಕೆಲಸ ಮಾಡದಿದ್ದಕ್ಕೆ ವಜಾ ಮಾಡುತ್ತೇನೆಂದು ಹೇಳಿದ್ದೆ. ಅದಕ್ಕಾಗಿ ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ ಎಂದು ಹೇಳಿದ್ದಾರೆ.
ಮನ್ಸೂರ್ ಅಲಿಯವರು ಕಳೆದ ಜೂನ್ನಿಂದ ಮುಡಾ ಆಯುಕ್ತರಾಗಿ ನಿಯೋಜನೆಗೊಂಡಿದ್ದರು. ಜನವರಿ 5ರಂದು ಮುಡಾದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮುಡಾ ಆಯುಕ್ತರು ತನಗೆ ಲೈಂಗಿಕ, ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಆಕೆ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹಾಗೂ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಐಪಿಸಿ ಸೆಕ್ಷನ್ 354, 354A ಅಡಿ ಉರ್ವ ಠಾಣೆಯಲ್ಲಿ ಮುಡಾ ಆಯುಕ್ತ ಮನ್ಸೂರ್ ಅಲಿಯವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆ ಪ್ರಗತಿಯಲ್ಲಿದೆ.
ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಮನ್ಸೂರ್ ಅಲಿಯವರು ಉರ್ವ ಪೊಲೀಸ್ ಠಾಣೆಗೆ ಹಾಜರಾಗಿ ಇನ್ಸ್ಪೆಕ್ಟರ್ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾರೆ. ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿ, 'ಡಿಸೆಂಬರ್ 27ರಂದು ಮುಡಾದಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಅದರ ನಡಾವಳಿಗಳನ್ನು ಮೂರು ದಿನಗಳೊಳಗಾಗಿ ಆ ಉದ್ಯೋಗಿ ನೀಡಬೇಕಿತ್ತು. ನೂರಕ್ಕಿಂತಲೂ ಅಧಿಕ ಪುಟಗಳಿರುವ ಆ ನಡಾವಳಿಗಳನ್ನು ಆಕೆ ತಪ್ಪುತಪ್ಪಾಗಿ ಟೈಪಿಸಿ ತಂದಿದ್ದರು. ಅದಕ್ಕಾಗಿ ಆಕೆಗೆ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಬೇರೆಯವರನ್ನು ಆ ಜಾಗಕ್ಕೆ ನೇಮಕ ಮಾಡುತ್ತೇನೆ ಎಂದು ತಾಕೀತು ಮಾಡಿದ್ದೆ.
ಅದಕ್ಕೆ ಆಕೆ ತಮ್ಮ ಕಡೆಯಿಂದ ಇಷ್ಟೊಂದು ಕೆಲಸ ಮಾಡಲು ಸಾಧ್ಯವಿಲ್ಲ. ಬೇರೆಯವರನ್ನು ನೇಮಕ ಮಾಡಿ ಎಂದು ಉದ್ಧಟತನದಿಂದ ಹೋಗಿದ್ದರು. ಆ ಬಳಿಕ ಅವರ ಬದಲಿಗೆ ಬೇರೆಯವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಅಧಿಸೂಚನೆ ನೀಡಿದ್ದೆ. ಆದ್ದರಿಂದ ಆಕೆ ಕೆಲಸ ಕಳೆದುಕೊಳ್ಳುವ ಭೀತಿಯಿಂದಾಗಿ ಹಗೆತನದಿಂದ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ' ಎಂದರು.
'ಈಗಾಗಲೇ ನಾನು ಪೊಲೀಸ್ ತನಿಖಾಧಿಕಾರಿ ಮುಂದೆ ವಿವರವಾದ ಮಾಹಿತಿ ನೀಡಿದ್ದೇನೆ. ಅಲ್ಲದೆ ಆಕೆಯೂ ತನ್ನಿಂದ ತಪ್ಪಾಗಿದೆ. ಹಾಗೆ ಮಾಡಬಾರದಿತ್ತು ಎಂದು ಹೇಳಿದ್ದರು. ಈಗಲೂ ಅವರು ಕೆಲಸಕ್ಕೆ ಬರುತ್ತಿದ್ದಾರೆ. ತನಿಖಾಧಿಕಾರಿಯೂ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ' ಎಂದು ಮನ್ಸೂರ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ : ಮಂಗಳೂರು: ಮೂಡಾ ಆಯುಕ್ತರ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು