ಮಂಗಳೂರು: ಪ್ರತಿಭಟನೆಯ ವೇಳೆ ಮೃತಪಟ್ಟ ರೈತರ ಮನೆಗೆ ಸಾಂತ್ವನ ಹೇಳಹೊರಟ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೇಲೆ ಮ್ಯಾನ್ ಹ್ಯಾಂಡಲ್ ಮಾಡಲಾಗಿದೆ. ಇದು ಭಾರತೀಯ ಸಂಸ್ಕೃತಿಗೆ ಮಾಡಿರುವ ಅವಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, 'ಪ್ರತಿಭಟನೆ ಮಾಡುವುದು ಹಕ್ಕು. ಗಾಂಧೀಜಿಯವರು ಅಹಿಂಸೆಯ ಮೂಲಕ ಹೋರಾಟ ಮಾಡಲು ಹೇಳಿದ್ದಾರೆ. 11 ತಿಂಗಳಿನಿಂದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ರೈತರ ಮೇಲೆ ಮಂತ್ರಿಯ ಮಗ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಆದರೆ ಯಾರನ್ನೂ ಈವರೆಗೆ ಬಂಧಿಸಿಲ್ಲ, ರಾಜೀನಾಮೆ ಪಡೆದುಕೊಂಡಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ ಜಾಸ್ತಿಯಾಗ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪೊಲೀಸರ ಅಧಿಕಾರವನ್ನು ಕಾರ್ಯಕರ್ತರಿಗೆ ಕೊಟ್ಟುಬಿಟ್ಟಿದ್ದಾರೆ. ಬಹಿರಂಗವಾಗಿಯೇ ನಮ್ಮ ಕಾರ್ಯಕರ್ತರಿಗೆ ಹೊಡೆಯುವುದಾಗಿ ಹೇಳುತ್ತಿದ್ದಾರೆ' ಎಂದರು.
'ಸುಳ್ಯ ಕೋರ್ಟ್ಗೆ ಹಾಜರಾಗಲು ಬಂದಿದ್ದೇನೆ'
'ನಾನು ಇಂಧನ ಸಚಿವನಾಗಿದ್ದಾಗ ಯಾರೋ ಒಬ್ಬ ತರ್ಲೆ ಫೋನ್ ಮಾಡಿ ನನಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಮ್ಮ ಅಧಿಕಾರಿಗಳು ಅವನ ವಿರುದ್ಧ ದೂರು ನೀಡಿದ್ದರು. ಅಧಿಕಾರಿಗಳಿಗೂ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಬರಬೇಕು ಎಂದು ಸುಳ್ಯ ನ್ಯಾಯಾಲಯ ಹೇಳಿತ್ತು. ಹೀಗಾಗಿ ಆಗಮಿಸಿದ್ದೇನೆ' ಎಂದು ತಿಳಿಸಿದರು.
ಇದನ್ನೂ ಓದಿ: ರೈತರ ಮೇಲೆ ಕಾರು ಹರಿಸಿದ ಪ್ರಕರಣ: ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ