ಮಂಗಳೂರು: ಮಹಾನಗರ ಪಾಲಿಕೆಯು ನಗರದ ಕಾವೂರುನಲ್ಲಿರುವ ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ಬೆಳ್ಳಂಬೆಳಗ್ಗೆ ಏಕಾಏಕಿ ತೆರವುಗೊಳಿಸಿದ್ದು, ಈ ಸಂದರ್ಭ ಅಸಹಾಯಕರಾದ ಬೀದಿಬದಿ ವ್ಯಾಪಾರಸ್ಥರು ಅಲ್ಲಿಯೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ಕಾವೂರು ಜಂಕ್ಷನ್ನಲ್ಲಿರುವ ಬೀದಿಬದಿ ವ್ಯಾಪಾರಿಗಳ ಸಣ್ಣ ಸಣ್ಣ ಟಾರ್ಪಲ್ ಹಾಕಿರುವ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳು ಅಸಹಾಯಕರಾಗಿ ತಮಗೆ ವ್ಯಾಪಾರ ಮಾಡಲು ಅವಕಾಶ ನೀಡಿ ಎಂದು ಅವಲತ್ತುಕೊಂಡರೂ ಕ್ಯಾರೆ ಎನ್ನದ ಅಧಿಕಾರಿಗಳು ಪೊಲೀಸರ ಸಮಕ್ಷಮದಲ್ಲಿ ಈ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದ ಬೇಸತ್ತ ಬೀದಿಬದಿ ವ್ಯಾಪಾರಿಗಳು ಅಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.
ಬೀದಿಬದಿ ವ್ಯಾಪಾರಸ್ಥೆಯೋರ್ವರು ಮಾತನಾಡಿ, ಬಹಳ ವರ್ಷಗಳಿಂದ ನಾನು ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದೇನೆ. ನನಗೆ 85 ಸಾವಿರ ರೂ. ಪಾವತಿಸಿ ಹೊಸ ಮಾರುಕಟ್ಟೆಗೆ ತೆರಳಬೇಕು ಎಂದು ಮನಪಾ ಆದೇಶ ನೀಡಿದೆ. ನಾನು ಕಪ್ಪೆಚಿಪ್ಪು ಮಾರುವವಳು. ಅಷ್ಟೊಂದು ಹಣ ನನ್ನಲ್ಲಿ ಎಲ್ಲಿಂದ ಬರಬೇಕು. ನನಗೆ ಕಾಲುನೋವು ಇದ್ದು, ವಾರಕ್ಕೊಮ್ಮೆ ಆಸ್ಪತ್ರೆಗೆ ತರಳಿ ಇಂಜೆಕ್ಷನ್ ಪಡೆಯಬೇಕು. ನಾನು ದುಡಿಯುವುದರಿಂದಲೇ ನಮ್ಮ ಸಂಸಾರ ಸಾಗುತ್ತಿದ್ದು, ಸರ್ಕಾರ ಯಾಕೆ ಈ ರೀತಿ ಅನ್ಯಾಯ ಮಾಡುತ್ತಿದೆ. ಅವರಿಗೆ ಕನಿಕರ ಇಲ್ಲವೇ?. ಈ ವ್ಯಾಪಾರವಲ್ಲದೆ ನಮಗೆ ಬದುಕಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಕಾವೂರು ಜಂಕ್ಷನ್ನಲ್ಲಿ ಕಳೆದ 30 ದಶಕಗಳಿಂದ ಬೀದಿಬದಿ ವ್ಯಾಪಾರಸ್ಥರು ತರಕಾರಿ, ಹಣ್ಣು-ಹಂಪಲು, ಹೂವು, ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದೀಗ ಬಹುಮಹಡಿ ಕಟ್ಟಡಗಳು ಇಲ್ಲಿ ಬೆಳೆದಿದ್ದು, ಆ ಬಳಿಕ ಬಡಪಾಯಿ ವ್ಯಾಪಾರಸ್ಥರು ಅಲ್ಲಿಂದ ತೆರವುಗೊಳ್ಳಬೇಕೆಂದು ದೌರ್ಜನ್ಯ ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಕಟ್ಟಡ ನಿರ್ಮಾಣ ಮಾಫಿಯಾಗಳೊಂದಿಗೆ ಶಾಮೀಲಾಗಿ ಈ ಕೃತ್ಯ ನಡೆಸುತ್ತಿದ್ದಾರೆ ಎಂದು ದೂರಿದರು.
2014ರಲ್ಲಿ ಬೀದಿಬದಿ ವ್ಯಾಪಾರಿಗಳ ನಿಯಂತ್ರಣ ಮತ್ತು ಸಂರಕ್ಷಣಾ ಕಾಯ್ದೆ ಇಡೀ ದೇಶದಲ್ಲಿ ಜಾರಿಗೊಂಡಿದೆ. ಇದು ಕಾವೂರಿನ ಬೀದಿಬದಿ ವ್ಯಾಪಾರಿಗಳಿಗೂ ಅನ್ವಯಿಸುತ್ತದೆ. ಬೀದಿಬದಿ ವ್ಯಾಪಾರಿಗಳಿಗಾದ ಅನ್ಯಾಯದ ಬಗ್ಗೆ ನಾವು ಪೊಲೀಸರಿಗೆ ದೂರು ನೀಡುತ್ತೇವೆ. ಅಲ್ಲದೆ ಜಿಲ್ಲಾಧಿಕಾರಿಗೂ ಮನವಿ ನೀಡಲಿದ್ದೇವೆ ಎಂದು ಹೇಳಿದರು.