ಮಂಗಳೂರು: ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಬಗ್ಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಈ ವಿವಾದ ಆರಂಭವಾಗಲು ಎಬಿವಿಪಿ ಒತ್ತಡವೇ ಕಾರಣ, ಸಿಂಡಿಕೇಟ್ ಸಭೆ ನಿರ್ಣಯ ತೆಗೆದುಕೊಂಡಿರುವುದಕ್ಕೆ ಎಬಿವಿಪಿ ಒತ್ತಡವೇ ಕಾರಣ ಎಂದು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ವಿದ್ಯಾರ್ಥಿನಿ ಗೌಸಿಯಾ, ನಾವು ಜಿಲ್ಲಾಧಿಕಾರಿ ಬಳಿ ಚರ್ಚಿಸಿದಾಗ ಅವರ ಅಸಹಾಯಕತೆ ಗೊತ್ತಾಗುತ್ತದೆ. ಸಿಂಡಿಕೇಟ್ ಆದೇಶವಾಗಿರುವುದು ಜಿಲ್ಲಾಧಿಕಾರಿಗೆ ಏನೂ ಮಾಡಲು ಆಗುವುದಿಲ್ಲ ಎಂದು ಗೊತ್ತಾಗಿದೆ. ಅವರ ಮಾತಿನ ಪ್ರಕಾರ ನಾವು ಕಾನೂನು ಹೋರಾಟ ಮಾಡಬಹುದು.
ಕರ್ನಾಟಕದಲ್ಲಿ ಈ ಹಿಂದೆ ಆದ ಹಿಜಾಬ್ ವಿವಾದಕ್ಕೂ, ಮಂಗಳೂರು ವಿವಿಯಲ್ಲಿ ಉಂಟಾಗಿರುವ ಹಿಜಾಬ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಎಬಿವಿಪಿಯ ಒತ್ತಡದಿಂದ ಸಿಂಡಿಕೇಟ್ ಸಭೆಯಲ್ಲಿ ಹಿಜಾಬ್ ವಿರುದ್ಧ ಆದೇಶ ಮಾಡಲಾಗಿದೆ. ಹೈಕೋರ್ಟ್ ಆದೇಶದ ಮೇಲೆ ಇದನ್ನು ಮಾಡಿಲ್ಲ ಎಂದು ಆರೋಪಿಸಿದರು.
ಎಲ್ಲರೂ ಹಿಜಾಬ್ ಮುಖ್ಯವೋ, ಶಿಕ್ಷಣ ಮುಖ್ಯವೋ ಎಂದು ಪ್ರಶ್ನೆ ಹಾಕುತ್ತಿದ್ದಾರೆ. ಅದಕ್ಕೆ ನಾವು ಎಬಿವಿಪಿಯ ಒತ್ತಡ ಮುಖ್ಯವೋ, ನಮ್ಮ ಶಿಕ್ಷಣ ಮುಖ್ಯವೊ ಎಂದು ಪ್ರಶ್ನಿಸುತ್ತಿದ್ದೇವೆ. ಮಂಗಳೂರು ವಿವಿಯಲ್ಲಿ ಆಗಿರುವ ಸಮಸ್ಯೆ ಹೈಕೋರ್ಟ್ಗೆ ಹೋಗಬೇಕಾಗಿಲ್ಲ. ವಿಶ್ವವಿದ್ಯಾಲಯದಲ್ಲಿ ಮುಗಿಯುವಂತಹ ವಿಷಯವಾಗಿದೆ. ಹೈಕೋರ್ಟ್ ನಲ್ಲಿ ಈ ವಿಚಾರ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾವು ಪ್ರತಿಯೊಬ್ಬರ ಬಳಿ ಕೇಳಿದ್ದೆವು. ಯು ಟಿ ಖಾದರ್ ಬಳಿಯೂ ಹೋಗಿದ್ದೆವು. ಅವರು ಸರಿಯಾದ ಸ್ಪಂದನೆ ನೀಡಿಲ್ಲ. ಒಮ್ಮೆ ಡಿ ಸಿ ಜೊತೆಗೆ ಮಾತನಾಡಲು ಸಹಾಯ ಮಾಡಿದ್ದರು. ಅವರಿಗೆ ಅಡ್ಯಾರ್ ನಲ್ಲಿ ಕ್ರಿಕೆಟ್ ಆಡಲು ಅಷ್ಟೆ ಗೊತ್ತು ಎಂದು ಟೀಕಿಸಿದರು.
ಎಲ್ಲ ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆಗಳು,ಜಾತ್ಯತೀತರು ನಮಗೆ ಸಹಾಯ ಮಾಡುವುದಿದ್ದರೆ ನಮ್ಮ ಜೊತೆಗೆ ಸೇರಬಹುದು, ನಾವು ಅವರ ಜೊತೆಗೆ ಸೇರುತ್ತೇವೆ. ಕಾನೂನಾತ್ಮಕ ಹೋದರೆ ಸಮಯ ತೆಗೆಯುತ್ತದೆ. ಈಗಾಗಲೇ ಹಾಜರಾತಿ ಕಳೆದುಕೊಂಡಿದ್ದೇವೆ. ಹಾಜರಾತಿ ಇಲ್ಲದೇ ಪರೀಕ್ಷೆ ಬರೆಯಲು ಆಗುವುದಿಲ್ಲ. ಕಾಲೇಜಿಗೆ ಹೋಗಬೇಕೆಂದು ಇದೆ. ನಾಳೆ ಏನು ಆಗುತ್ತದೆ ನೋಡೋಣ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಓದಿ :ಮೂರನೇ ಅಭ್ಯರ್ಥಿ ಗೆಲುವಿಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ : ಸಚಿವ ಆರ್.ಅಶೋಕ್