ಮಂಗಳೂರು: ರಾಜ್ಯ ಸರ್ಕಾರ ನೇಮಿಸಿರುವ 16 ಅಕಾಡೆಮಿಗಳ ಅಧ್ಯಕ್ಷರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ ಅವಕಾಶ ಸಿಕ್ಕಿದೆ. ಕರ್ನಾಟಕ ಬ್ಯಾರಿ ಅಕಾಡೆಮಿಗೆ ರಹೀಂ ಉಚ್ಚಿಲ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಅಜಕಳ ಗಿರೀಶ್ ಭಟ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ದಯಾನಂದ ಕತ್ತಲಸಾರ್ ಆಯ್ಕೆ ಆಗಿದ್ದು, ಸದಸ್ಯರಾಗಿ ದಿನೇಶ್ ರೈ ಕಡಬ ಆಯ್ಕೆಯಾಗಿದ್ದಾರೆ.
ರಾಜ್ಯ ಸರ್ಕಾರವು ಮೂರು ವರ್ಷದ ಅವಧಿಗೆ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಿ ಅಕ್ಟೋಬರ್ 15 ರಂದು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಹೀಂ ಉಚ್ಚಿಲ್ ಅವರು ಮಂಗಳೂರು ನಿವಾಸಿಯಾಗಿದ್ದು, ಎರಡನೇ ಬಾರಿ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಜಕಳ ಗಿರೀಶ್ ಭಟ್ ಕನ್ನಡದಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದ್ದು, ಇವರಿಗೆ ಅಕಾಡೆಮಿ ಸ್ಥಾನ ಅರಸಿ ಬಂದಿದೆ. ಇನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಿ ಆಯ್ಕೆಯಾದ ದಯಾನಂದ ಕತ್ತಲಸಾರ್ ಅವರು ಕೂಡ ಮಂಗಳೂರಿನವರಾಗಿದ್ದಾರೆ. ತುಳು ಜಾನಪದ ವಿದ್ವಾಂಸರಾಗಿರುವ ಇವರು ತುಳು ಸಾಹಿತ್ಯ ಅಕಾಡೆಮಿ ಸಾರಥ್ಯ ವಹಿಸಲಿದ್ದಾರೆ.
ಇನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸ್ಥಾನಕ್ಕೆ ಹೆಸರಾಂತ ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ರೈ ಕಡಬ ಆಯ್ಕೆಯಾಗಿದ್ದಾರೆ. ನೂತನ ಕಡಬ ತಾಲೂಕು ರಚನೆಯಾದ ಬಳಿಕ ಕಲಾವಿದರೊಬ್ಬರನ್ನು ಕಡಬದಿಂದ ಆಯ್ಕೆ ಮಾಡಿರುವುದಕ್ಕೆ ಇಲ್ಲಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.