ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳವು, ಗಾಂಜಾ, ಹಲ್ಲೆ, ಕೊಲೆ ಯತ್ನದಂತಹ ವಿವಿಧ ಪ್ರಕರಣಗಳಲ್ಲಿ ತೊಡಗಿಕೊಂಡಿರುವ 350ಕ್ಕೂ ಅಧಿಕ ರೌಡಿಶೀಟರ್ಗಳಿಗೆ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಪರೇಡ್ ನಡೆಸಿ ಪೊಲೀಸ್ ಆಯುಕ್ತರು ಖಡಕ್ ವಾರ್ನಿಂಗ್ ನೀಡಿದರು.
ಈ ಸಂದರ್ಭ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಮಾತನಾಡಿ, ಮುಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳದೆ ಇಂದಿನಿಂದಲೇ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಬದುಕಬೇಕು. ಎಲ್ಲಾ ಅಪರಾಧ ಚಟುವಟಿಕೆಗಳನ್ನು ತೊರೆದು ಸ್ವಯಂ ಉದ್ಯೋಗ ನಡೆಸುವ ಉದ್ದೇಶ ಉಳ್ಳವರಿಗೆ ಸರಕಾರದಿಂದ ಹಲವು ಯೋಜನೆಗಳಡಿಗಳಲ್ಲಿ ನೆರವು ನೀಡಲು ಸಹಕರಿಸುತ್ತೇವೆ. ಅಲ್ಲದೆ ಎನ್ಜಿಒಗಳು, ಸಂಘ ಸಂಸ್ಥೆಗಳ ಮೂಲಕವೂ ಉದ್ಯೋಗಾವಕಾಶ ನೀಡಲು ನೆರವು ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಮನೆಯ ಒತ್ತಡದಿಂದಾಗಿ ಅಪರಾಧ ಎಸಗಿ ರೌಡಿಗಳಾಗಿದ್ದಲ್ಲಿ ಅಂತವರ ಮನೆಯ ಸದಸ್ಯರಿಗೂ ಪೊಲೀಸ್ ಇಲಾಖೆಯಲ್ಲಿ ತರಬೇತಿ ನೀಡಲಾಗುವುದು. ಆ ಮೂಲಕ ರೌಡಿಯೋರ್ವನ ಮನೆಯಲ್ಲಿ ಮತ್ತೋರ್ವ ರೌಡಿ ಹುಟ್ಟದಂತೆ ನೋಡಿಕೊಳ್ಳುವುದು ಈ ತರಬೇತಿಯ ಉದ್ದೇಶ. ಅಲ್ಲದೇ, ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡವರು ತಮ್ಮ ನಿತ್ಯದ ಚಟುವಟಿಕೆಗಳ ಬಗ್ಗೆ ನಿಮ್ಮ ವ್ಯಾಪ್ತಿಯ ಠಾಣೆಗಳಿಗೆ ಪ್ರತೀ ಸೋಮವಾರ ಬಂದು ಮಾಹಿತಿ ನೀಡಿದಲ್ಲಿ ಅವರ ಉತ್ತಮ ನಡತೆಯನ್ನು ವಿಶೇಷವಾಗಿ ಪರಿಗಣಿಸಿ ಒಳ್ಳೆಯ ನಾಗರಿಕರಾಗಿ ಬಾಳಲು ಪೊಲೀಸ್ ಇಲಾಖೆ ಮುತುವರ್ಜಿ ವಹಿಸುತ್ತದೆ. ನ್ಯಾಯಾಲಯಗಳಲ್ಲಿರುವ ಕೇಸುಗಳ ವಿಚಾರಣೆಗೆ ತಪ್ಪದೆ ಹಾಜರಾಗಬೇಕು ಎಂದು ಸೂಚಿದರು.
ರೌಡಿಶೀಟರ್ಗಳ ಪ್ರತಿ ಚಲನವಲನದ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, 'ಮೈ ಬೀಟ್ ಮೈ ಪ್ರೌಡ್' ಕಾರ್ಯಕ್ರಮದಡಿಯಲ್ಲಿ ನಗರದೆಲ್ಲೆಡೆ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ಹೇಳಿದರು.