ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಮತ್ತು ಸಂಚಾರ ನಿಯಮ ಉಲ್ಲಂಘಿಸಿರುವ 222 ವಾಹನ ಚಾಲಕರ ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸಲು ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಪ್ರಸ್ತಾವನೆ ಕಳುಹಿಸಲಾಗಿದೆ.
ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿರುವ 113 ಚಾಲಕರ ಡಿಎಲ್ ರದ್ದತಿ, ಅದೇ ರೀತಿ ಮದ್ಯಸೇವಿಸಿ ಚಾಲನೆ - 1, ಸರಕು ಸಾಗಾಟದ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ 16, ವಾಹನ ಸಂಚಾರದಲ್ಲಿರುವಾಗಲೇ ಮೊಬೈಲ್ ಬಳಕೆ - 4, ಕೆಂಪು ಸಿಗ್ನಲ್ ಜಂಪಿಂಗ್ - 5, ಕಮರ್ಷಿಯಲ್ ವಾಹನಗಳಲ್ಲಿ ಅತಿ ಹೆಚ್ಚಿನ ಪ್ರಯಾಣಿಕರ ಸಾಗಾಟ - 4, ದ್ವಿಚಕ್ರ ವಾಹನಗಳಲ್ಲಿ ಮೂವರು ಪ್ರಯಾಣ - 3, ಹೆಲ್ಮೆಟ್ ಇಲ್ಲದೆ ಸಂಚಾರ - 59, ಸೀಟ್ ಬೆಲ್ಟ್‌ರಹಿತ ಪ್ರಯಾಣ - 17 ಪ್ರಕರಣಗಳಲ್ಲಿ ಡಿಎಲ್ ರದ್ದು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಪ್ರತಿನಿತ್ಯ ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ-1988/2019 ಅಡಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಡಿಎಲ್ಗಳನ್ನು ಅಮಾನತುಪಡಿಸಲು ಆದೇಶಿಸಿದೆ. ಜುಲೈ 13ರಿಂದ 25ರವರೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಮತ್ತು ಸಂಚಾರ ನಿಯಮ ಪಾಲನೆ ಮಾಡದಿರುವ ಪ್ರಕರಣಗಳಲ್ಲಿ ಒಟ್ಟು 222 ಡಿಎಲ್ ಅಮಾನತುಪಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್.ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ ಟ್ರಾಫಿಕ್ ಪೊಲೀಸರು.. ವಿಡಿಯೋ ವೈರಲ್
ಗಾಂಜಾ ಮಾರಾಟದ ಆರೋಪಿಗಳು ಪೊಲೀಸ್ ಬಲೆಗೆ: ಮಂಗಳೂರಿನ ಬಂದರು ಪ್ರದೇಶದ ದಕ್ಕೆಯ ಶೌಚಾಲಯದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು 3.378 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಗರದ ಕಸ್ಬಾ ಬೆಂಗ್ರೆ ನಿವಾಸಿಗಳಾದ ಅಬ್ದುಲ್ ರಹೀಂ ಮತ್ತು ಮೊಹಮ್ಮದ್ ಅಶ್ರಫ್ ಬಂಧಿತರು. ಮಂಗಳೂರು ನಗರದ ಬಂದರು ಉತ್ತರ ದಕ್ಕೆಯಲ್ಲಿರುವ ಹಳೆಯ ಸಾರ್ವಜನಿಕ ಶೌಚಾಲಯದ ಬಳಿ ಆರೋಪಿಗಳು ಬುಧವಾರ ಆ್ಯಕ್ಟಿವಾ ಹೋಂಡಾ ಸ್ಕೂಟರ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯನುಸಾರ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತರಿಂದ 1,67,000 ರೂ. ಮೌಲ್ಯದ ಒಟ್ಟು 3.378 ಕೆಜಿ ಗಾಂಜಾ, ತೂಕ ಮಾಪನ, 4,940 ರೂ. ನಗದು ಹಾಗೂ ಆ್ಯಕ್ಟಿವಾ ಹೋಂಡಾ ಸ್ಕೂಟರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 83/2023 U/s 8(c), 20(b) (ii) (B) NDPS ACT ರನ್ವಯ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ