ಮಂಗಳೂರು (ದಕ್ಷಿಣ ಕನ್ನಡ): ಕಳೆದ ಐದು ತಿಂಗಳಿನಿಂದ ಮಾದಕ ವಸ್ತು ಎಂಡಿಎಂಎ ವಿರುದ್ಧ ಸಮರ ಸಾರಿ ಡ್ರಗ್ಸ್ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆಗೊಂಡಿದ್ದಾರೆ. ಇದೀಗ 2008ರ ಬ್ಯಾಚ್ನ ಅನುಪಮ್ ಅಗರ್ವಾಲ್ ಅವರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ.
ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ವರ್ಗಾವಣೆ ಮಾಡಿ ಯಾವುದೇ ಹುದ್ದೆಯನ್ನು ತೋರಿಸಿಲ್ಲ. ಕಳೆದ ಐದು ತಿಂಗಳ ಅವಧಿಯಲ್ಲಿ ಕುಲದೀಪ್ ಅವರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್, ಗಾಂಜಾ, ಎಂಡಿಎಂಎ ಮಾದಕ ದ್ರವ್ಯ ದಂಧೆಕೋರರನ್ನು ಮಟ್ಟಹಾಕಿ ಹಲವರನ್ನು ಜೈಲಿಗೆ ಕಳುಹಿಸಿದ್ದರು. ಕೋಟ್ಯಂತರ ಮೌಲ್ಯದ 1.5 ಕೆ.ಜಿ ಎಂಡಿಎಂಎ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು.
ಅದೇ ರೀತಿ ಸಾರಿಗೆ ನಿಯಮ ಮೀರುವವರ ವಿರುದ್ಧವೂ ಕ್ರಮ ಕೈಗೊಂಡಿದ್ದರು. ಜೊತೆಗೆ ಮಟ್ಕಾ ದಂಧೆ, ಸೈಬರ್ ಕ್ರೈಮ್ ವಿರುದ್ಧವೂ ಕ್ರಮ ಜರುಗಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಡ್ರಗ್ಸ್ ಜಾಗೃತಿ ಮೂಡಿಸುವಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದರು. ಮಂಗಳೂರು ಖಾಸಗಿ ಬಸ್ಗಳ ನಿಯಮ ಮೀರಿದ ಸಂಚಾರವನ್ನು ಹತೋಟಿಗೆ ತರುವಲ್ಲಿಯೂ ಕೂಡ ಇವರ ಪಾತ್ರ ಪ್ರಮುಖವಾಗಿತ್ತು.
ಇದನ್ನೂ ಓದಿ: Transfer Order: 10 ಮಂದಿ IAS ಅಧಿಕಾರಿಗಳ ವರ್ಗಾವಣೆ
35 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಕಳೆದ ಎರಡು ದಿನಗಳ ಹಿಂದೆ 2018, 2019 ಮತ್ತು 2020ರ ಬ್ಯಾಚ್ನ 10 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಅದರಂತೆ ಐಪಿಎಸ್ ಅಧಿಕಾರಿಗಳಾದ ಪೃಥ್ವಿಕ್ ಶಂಕರ್ ಮತ್ತು ಕನಿಕ ಸಿಕ್ರಿವಾಲ್ ಅವರನ್ನು ಸಿಐಡಿ ಎಸ್.ಪಿಯಾಗಿ ನಿಯೋಜಿಸಲಾಗಿದೆ. ಗುಂಜಾನ್ ಆರ್ಯ ಹಾಗೂ ಕುಶಾಲ್ ಚೌಕ್ಸೆ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಮಂಗಳೂರು ಲಾ & ಆರ್ಡರ್ ಡಿಸಿಪಿಯಾಗಿ ಸಿದ್ದಾರ್ಥ್ ಗೋಯಲ್, ಬೆಳಗಾವಿ ಲಾ & ಆರ್ಡರ್ ಡಿಸಿಪಿಯಾಗಿ ರೋಹನ್ ಜಗದೀಶ್, ಬೆಂಗಳೂರು ಸೆಂಟರ್ ಆ್ಯಂಟಿ ಟೆರರಿಸ್ಟ್ ಎಸ್.ಪಿಯಾಗಿ ಶಿವಾಂಶು ರಜಪೂತ್, ಉಡುಪಿ ಆ್ಯಂಟಿ ನಕ್ಸಲ್ ಫೋರ್ಸ್ ಎಸ್.ಪಿ ಆಗಿ ಜಿತೇಂದ್ರ ಕುಮಾರ್ ದಯಾಮ, ಕೆಎಸ್ಆರ್ಪಿ ಬೆಟಾಲಿಯನ್ - 1 ಕಮ್ಯಾಂಡೆಂಟ್ ಆಗಿ ದೀಪನ್ ಎಂ.ಎನ್, ಬೆಂಗಳೂರು ವೈರ್ಲೆಸ್ ವಿಭಾಗದ ಎಸ್ಪಿಯಾಗಿ ಮಿಥುನ್ ಎಚ್ ಎನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಸೆಪ್ಟಂಬರ್ 2ರಂದು ಆದೇಶ ಹೊರಡಿಸಿತ್ತು. ಇದೀಗ ಮತ್ತೆ ರಾಜ್ಯದ 35 ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: ಓರ್ವ ಐಎಎಸ್ ಅಧಿಕಾರಿ ವರ್ಗಾವಣೆ.. ಇಬ್ಬರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ ಸರ್ಕಾರ