ಮಂಗಳೂರು: ಈಕೆಗೆ ಶ್ವಾನವೆಂದರೆ ಪಂಚಪ್ರಾಣ. ಬಾಡಿಗೆ ಮನೆಯಲ್ಲಿದ್ದರೂ ಸಾಕಷ್ಟು ನಾಯಿಗಳಿಗೆ ಆಶ್ರಯ ನೀಡಿದ ಈ ಮಹಿಳೆ ಪ್ರತಿ ದಿನ ಬೀದಿ ನಾಯಿಗಳ ಹಸಿವು ನೀಗಿಸುತ್ತಾರೆ. ಇದೀಗ ತನ್ನ ಸಾಹಸದ ಮೂಲಕ ಕರಾವಳಿ ಜನರನ್ನು ಬೆರಗಾಗಿಸಿದ್ದಾರೆ ಈ ಧೀರೆ..
ಹೌದು, ಈಕೆಯ ಶ್ವಾನ ಪ್ರೀತಿ ಇಷ್ಟಕ್ಕೇ ಮುಗಿಯದೆ, ಬರೋಬ್ಬರಿ 45 ಅಡಿ ಆಳದ ಬಾವಿಗೆ ಇಳಿದು ಶ್ವಾನವೊಂದನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ ನಗರದ ಬಲ್ಲಾಳ್ ಬಾಗ್ ಸಮೀಪದ ದೊಡ್ಡಹಿತ್ಲುವಿನ ನಿವಾಸಿ ರಜನಿ ಡಿ. ಶೆಟ್ಟಿ.
ಶ್ವಾನದ ರಕ್ಷಣೆಗೆ 45 ಅಡಿ ಆಳದ ಬಾವಿಗಿಳಿದ ರಜನಿ, ಬಿಜೈ ನ್ಯೂ ರೋಡ್ ಬಳಿಯ ಮನೆಯೊಂದರ ಬಾವಿಗೆ ಶುಕ್ರವಾರ ರಾತ್ರಿ ಬಿದ್ದಿದ್ದ ಶ್ವಾನ ಅನಾಯಾಸವಾಗಿ ಮೇಲಕ್ಕೆ ಬರಲು ನೆರವಾಗಿದ್ದಾರೆ. ಶನಿವಾರ ಈ ವಿಚಾರ ಮನೆಯವರಿಗೆ ತಿಳಿದಿದ್ದು, ಶ್ವಾನ ಪ್ರಿಯೆ ರಜನಿ ಡಿ.ಶೆಟ್ಟಿಯವರ ಗಮನಕ್ಕೂ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ರಜನಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದೇ ಬಿಟ್ಟರು. ಬಳಿಕ ಶ್ವಾನಕ್ಕೂ ಹಗ್ಗ ಕಟ್ಟಿ ಅದನ್ನು ಮೇಲಕ್ಕೆ ತರುವ ಮೂಲಕ ಪ್ರಾಣ ಉಳಿಸಿದ್ದಾರೆ.
ಈ ಹಿಂದೆಯೂ ಅವರು ನಗರದ ಬಲ್ಲಾಳ್ ಬಾಗ್ನಲ್ಲಿ ಬಾವಿಗಿಳಿದು ನಾಯಿಯನ್ನು ರಕ್ಷಣೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈ ಮೂಲಕ ಅವರ ಶ್ವಾನ ಪ್ರೀತಿಯ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಓದಿ: ಕಾಲೆಕೋಲವೆಂಬ ಬೊಜ್ಜಕೋಲ: ಮೃತರ ಸದ್ಗತಿಗೆ ಕರಾವಳಿಯಲ್ಲೊಂದು ವಿಶೇಷ ಆಚರಣೆ!