ಮಂಗಳೂರು: ನವರಾತ್ರಿಯ ದಿನಗಳಲ್ಲಿ ಹೆಚ್ಚಿನ ಭಕ್ತರು ದೇವಿ ದೇವಾಲಯಗಳ ದರ್ಶನ ಮಾಡುವುದು ಸಾಮಾನ್ಯ. ದೇಗುಲ ದರ್ಶನ ಮಾಡುವ ಭಕ್ತರಿಗೆಂದೆ ಮಂಗಳೂರಿನಲ್ಲಿ ಕೆಎಸ್ಆರ್ಟಿಸಿ ದಸರಾ ದೇಗುಲ ದರ್ಶನ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದೆ. ಕಳೆದ ಬಾರಿ ಈ ಯೋಜನೆ ಯಶಸ್ವಿಗೊಂಡಿದ್ದ ಹಿನ್ನೆಲೆಯಲ್ಲಿ ಈ ಬಾರಿಯೂ ದೇಗುಲ ದರ್ಶನ ಪ್ಯಾಕೇಜ್ನ್ನು ಮುಂದುವರಿಸಿದೆ.
ಈ ಕುರಿತು, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ರಾಜೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಈ ಬಾರಿಯ ದಸರಾಗೆ ಮಂಗಳೂರು ಕೆಎಸ್ಆರ್ಟಿಸಿಯಿಂದ ನಾಲ್ಕು ವಿಶೇಷ ಪ್ಯಾಕೇಜ್ಗಳಿವೆ. ಒಂದನೇ ಪ್ಯಾಕೇಜ್ನಲ್ಲಿ ದಸರಾ ದರ್ಶಿನಿ ಮೂಲಕ ಮಂಗಳೂರಿನ ಒಂಬತ್ತು ದೇವಿ ದೇಗುಲಗಳ ದರ್ಶನ ಮಾಡಿಸಲಾಗುತ್ತದೆ. ಈ ಪ್ಯಾಕೆಜ್ನಲ್ಲಿ ಮಂಗಳಾದೇವಿ, ಪೊಳಲಿ, ಸುಂಕದಕಟ್ಟೆ, ಕಟೀಲು, ಬಪ್ಪನಾಡು, ಸಸಿಹಿತ್ಲು, ಚಿತ್ರಾಪುರ, ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ಈ ಪ್ಯಾಕೇಜ್ಗೆ ದರ ನೋಡುವುದಾದರೆ ನರ್ಮ್ ಬಸ್ನಲ್ಲಿ ಪ್ರತೀ ಪ್ರಯಾಣಿಕನಿಗೆ 400ರೂ. ಟಿಕೆಟ್ ದರ ಇದ್ದರೆ, ವೋಲ್ವೋ ಬಸ್ಗೆ 500 ರೂ. ದರ ವಿಧಿಸಲಾಗಿದೆ. 6 ರಿಂದ 12 ವರ್ಷಗಳ ಮಕ್ಕಳಿಗೆ 300 ರೂ. ದರ ವಿಧಿಸಲಾಗಿದೆ.
ಅದೇ ರೀತಿ 2ನೇ ಪ್ಯಾಕೇಜ್ ಪಂಚದುರ್ಗಾ ದರ್ಶನದಲ್ಲಿ, ದುರ್ಗಾಪರಮೇಶ್ವರಿ ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ತಲಪಾಡಿ, ಕಟೀಲು, ಮುಂಡ್ಕೂರು, ಬಪ್ಪನಾಡು, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳ ದರ್ಶನ ಅವಕಾಶ ಕಲ್ಪಿಸಲಾಗಿದೆ. ನರ್ಮ್ ಬಸ್ನಲ್ಲಿ ವಯಸ್ಕರಿಗೆ 400 ರೂ. ದರವಿದೆ. 3ನೇ ಪ್ಯಾಕೇಜ್ನಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ, ಉಚ್ಚಿಲ ಮಹಾಲಕ್ಷ್ಮಿ ದೇಗುಲ ದರ್ಶನ ಮಾಡಿಸಲಾಗುತ್ತದೆ. ಇದಕ್ಕೆ ಓರ್ವ ಪ್ರಯಾಣಿಕನಿಗೆ 500 ರೂ. ದರ ವಿಧಿಸಲಾಗಿದೆ. ಹಾಗೇ ಮಡಿಕೇರಿಯ 4ನೇ ಪ್ಯಾಕೇಜ್ನಲ್ಲಿ ರಾಜಾಸೀಟ್, ಅಬ್ಬಿಪಾಲ್ಸ್, ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಂಗಳಿಗೆ ಕರೆದೊಯ್ಯಲಾಗುತ್ತದೆ. ವಯಸ್ಕರಿಗೆ 500 ರೂ. ದರ ವಿಧಿಸಲಾಗಿದೆ.
ಮಂಗಳೂರಿನ ಸುತ್ತಮುತ್ತಲಿನ ದೇವಾಲಯಗಳಿಗೆ ವೋಲ್ವೊ, ನರ್ಮ್ ಬಸ್ಗಳಲ್ಲಿ ವಿಶೇಷ ಪ್ಯಾಕೇಜ್ ಹಮ್ಮಿಕೊಳ್ಳಲಾಗಿದೆ. ಅ.15 - 24ರವರೆಗೆ ಈ ನಾಲ್ಕು ಪ್ಯಾಕೇಜ್ ಇರಲಿದೆ. ಜನರ ಬೇಡಿಕೆ ಹೆಚ್ಚಿದ್ದಲ್ಲಿ ಅ.30ರವರೆಗೆ ವಿಸ್ತರಿಸಲಾಗುತ್ತದೆ. 25 ಕೆಎಸ್ಆರ್ಟಿಸಿ ಬಸ್ಗಳನ್ನು ಈ ವಿಶೇಷ ಪ್ಯಾಕೇಜ್ಗೆ ಮೀಸಲಿರಿಸಲಾಗುತ್ತದೆ. ಆದರೆ ಶಕ್ತಿ ಯೋಜನೆ ಇದಕ್ಕೆ ಅನ್ವಯವಾಗುವುದಿಲ್ಲ. ಎಲ್ಲರೂ ಪೂರ್ಣ ದರ ನೀಡಿಯೇ ಪ್ರಯಾಣಿಸಬೇಕಾಗುತ್ತದೆ. ಒಟ್ಟಿನಲ್ಲಿ ಕೆಎಸ್ಆರ್ಟಿಸಿ ಒಂದೇ ದಿನದಲ್ಲಿ ಹಲವಾರು ದೇಗುಲಗಳ ದರ್ಶನಗಳಿಗೆ ಅವಕಾಶ ನೀಡಿರುವುದು ವಿಶೇಷವೆನಿಸಿದೆ.
ಕೆಎಸ್ಆರ್ ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ ದಸರಾ ಪ್ಯಾಕೇಜ್ ಆರಂಭಿಸಲಾಗಿದ್ದು ಅ.15 ರಿಂದ 25 ರವರೆಗೆ ಇರುತ್ತದೆ. ಬೇಡಿಕೆ ಇದ್ದರೆ ಅದನ್ನು ಅ.30 ರವರೆಗೆ ವಿಸ್ತರಿಸಲಾಗುವುದು. ಈ ಬಾರಿ ನಾವು ನಾಲ್ಕು ಪ್ಯಾಕೆಜ್ ತಂದಿದ್ದೇವೆ. ಈ ಪ್ಯಾಕೇಜ್ಗಳು ಶಕ್ತಿ ಯೋಜನೆ ಅಡ್ಡಿ ಬರುವುದಿಲ್ಲ. ಈ ಎಲ್ಲ ಪ್ಯಾಕೇಜ್ಗಳು ಒಂದು ದಿನದೊಳಗೆ ಮುಗಿಸುವಂತಹ ಪ್ಯಾಕೇಜ್. ಕಳೆದ ವರ್ಷ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನರ ಸ್ಪಂದನೆ ಇತ್ತು. ಮೈಸೂರು ಬಿಟ್ಟರೆ ರಾಜ್ಯದ ಬೇರೆ ಎಲ್ಲಿಯೂ ಇಂತಹ ದರ್ಶನದ ಪ್ಯಾಕೇಜ್ಗಳಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ದಸರಾ ಜಂಜೂ ಸವಾರಿ ತಾಲೀಮು: ಮಳೆ ನಡುವೆಯೂ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು