ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನವೀಕರಣ ಕಾರ್ಯ ಪೂರ್ಣಗೊಂಡಿದೆ. 2.45 ಕಿಲೋ ಮೀಟರ್ ಉದ್ದದ ರನ್ ವೇ ನವೀಕರಣವನ್ನು 75 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ಮಾ.10 ರಿಂದ ರನ್ ವೇ ನವೀಕರಣ ಕಾಮಗಾರಿ ಆರಂಭಗೊಂಡಿತು.
ಕಾಂಕ್ರಿಟ್ ಕಾಮಗಾರಿಯ ಮೇಲೆ ಡಾಂಬರಿನ ನವೀಕರಣ ಮಾಡಿರುವುದು ಭಾರತದಲ್ಲಿ ಮೊದಲ ಕಾರ್ಯವಾಗಿದೆ. ವಿಮಾನ ನಿಲ್ದಾಣ ಜನವರಿ 27 ರಂದು ಯೋಜನೆಯ ಬಗ್ಗೆ ಪ್ರಾಥಮಿಕ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಿತ್ತು. ಜೂನ್ 1 ರಿಂದ ಎಂದಿನಂತೆ ದಿನದ 24 ಗಂಟೆಯು ರನ್ ವೇ ವಿಮಾನ ಸಂಚಾರಕ್ಕೆ ತೆರೆದುಕೊಳ್ಳಲಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ 2ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಪ್ರತಿದಿನ ಸುಮಾರು 36 ವಿಮಾನಗಳ ಸಂಚಾರವನ್ನು ನಿರ್ವಹಿಸುತ್ತದೆ. ನಿಗದಿತ ವಿಮಾನಗಳ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರದಂತೆ ರನ್ ವೇಯನ್ನು ಮರು ನವೀಕರಣ ಮಾಡಲು ವಿಮಾನ ನಿಲ್ದಾಣವು ಪ್ರತಿ ದಿನ ಬೆಳಗ್ಗೆ 9.30 ರಿಂದ ಸಂಜೆ 6 ರವರೆಗೆ 8-1/2 ಗಂಟೆಗಳ ಕಾಲ ವಿಮಾನಯಾನ ಸ್ಥಗಿತಗೊಳಿಸಲಾಗಿತ್ತು.
ಯೋಜನೆಯನ್ನು ಪೂರ್ಣಗೊಳಿಸಲು 75 ದಿನಗಳಲ್ಲಿ 529 ಗಂಟೆಗಳ ಅವಧಿ ತೆಗೆದುಕೊಳ್ಳಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಪ್ರತಿ ದಿನದ ಉಳಿದ 14.5 ಗಂಟೆಗಳ ಅವಧಿಯಲ್ಲಿ ಸರಾಸರಿ 18 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ರನ್ ವೇಯನ್ನು ಪ್ರತಿದಿನ ತೆರೆದಿಡಲಾಗಿತ್ತು. ರಜಾ ದಿನ ಮತ್ತು ಆದಿತ್ಯವಾರ ಮಾತ್ರ ಇಡೀ ದಿನ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಇದನ್ನೂ ಓದಿ: ಮಂಗಳೂರಿನಿಂದ ದೆಹಲಿಗೆ ಇಂದಿನಿಂದ ಇಂಡಿಗೋ ವಿಮಾನ ಯಾನ ಸೇವೆ ಆರಂಭ
ಮಾ.10 ರಿಂದ ಮೇ 28 ರವರೆಗೆ ನಡೆದ ಕಾಮಗಾರಿಯಲ್ಲಿ 81,696 ಟನ್‌ಗಳಷ್ಟು ಡಾಂಬರನ್ನು ಬಳಸಲಾಗಿದೆ. ಈ ಅವಧಿಯಲ್ಲಿ 2.51 ಲಕ್ಷ ಮಾನವ ಗಂಟೆಗಳನ್ನು ಬಳಸಲಾಗಿದೆ. ಕಾಮಗಾರಿಗೆ 80 ಅತ್ಯಾಧುನಿಕ ಯಂತ್ರಗಳನ್ನು ಬಳಸಲಾಗಿತ್ತು. ಸಮಯಕ್ಕೆ ಅನುಗುಣವಾಗಿ ಡಂಪರ್ ಟ್ರಕ್ಗಳು ಡಾಂಬರನ್ನು ರನ್ ವೇಗೆ ಸಾಗಿಸುತ್ತಿದ್ದವು. ಅಲ್ಲಿ ನಿಗದಿಪಡಿಸಿದ ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದರು. ರನ್ ವೇಯನ್ನು ಸಂಪೂರ್ಣ ಸ್ವಚ್ಚಗೊಳಿಸಿದ ನಂತರ ಟಾರ್ನ್ನು ರನ್ ವೇಗೆ ಹಾಕಲಾಗುತ್ತಿತ್ತು. ಈ ಸಂದರ್ಭದಲ್ಲಿ ಮೇಲ್ಮೈ ಗುಣಮಟ್ಟದ ಬಗ್ಗೆ ನಿಗಾ ವಹಿಸಲಾಗಿತ್ತು.
ಭವಿಷ್ಯದ ಕಾರ್ಯಾಚರಣೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರನ್ ವೇ ಸೆಂಟರ್ ಲೈಟಿಂಗ್ ಅನ್ನು ಅಳವಡಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವಕಾಶ ಕಲ್ಪಿಸಿದೆ. "ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ತಂಡವು ನಿಗದಿತ ಅವಧಿಗಿಂತ ಮುಂಚಿತವಾಗಿ ಯೋಜನೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ವಿಮಾನ ನಿಲ್ದಾಣ ತಂಡವನ್ನು ಶ್ಲಾಘಿಸಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತದ ಸುರಕ್ಷಿತ ಟೇಬಲ್‌ಟಾಪ್ ವಿಮಾನ ನಿಲ್ದಾಣವನ್ನಾಗಿ ಮಾಡಲು ಬದಲಾದ ಪ್ರಯಾಣದ ಸಮಯವನ್ನು ನಿಭಾಯಿಸಲು ಅವರ ಅಚಲ ಬೆಂಬಲ ಮತ್ತು ತಿಳುವಳಿಕೆಗಾಗಿ ಧನ್ಯವಾದಗಳನ್ನು ಅರ್ಪಿಸಿದೆ" ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಏರ್ಪೋರ್ಟ್ ರನ್ ವೇಯಲ್ಲಿ ತಾಂತ್ರಿಕ ಸಮಸ್ಯೆ: ಮಂಗಳೂರಿನ ಬದಲು ಕೇರಳದಲ್ಲಿ ವಿಮಾನ ಲ್ಯಾಂಡ್