ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಲ್ಕಿ ನಗರ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ಗೆ ದಂಡ ಮತ್ತು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಮಹತ್ವದ ಆದೇಶ ಮಾಡಿದೆ. ಅಪರಾಧಿಗೆ 4 ವರ್ಷ ಸಾದಾ ಸಜೆ ಹಾಗೂ 26,50,000 ರೂ. ದಂಡ ವಿಧಿಸಲಾಗಿದೆ.
ಜೂ.ಇಂಜಿನಿಯರ್ ಪದ್ಮನಾಭ.ಎನ್.ಕೆ ಶಿಕ್ಷೆಗೊಳಗಾದವರು. ಇವರ ಮೇಲೆ ಲೋಕಾಯುಕ್ತ ಪೊಲೀಸರು 2015ರ ಫೆಬ್ರವರಿ ತಿಂಗಳಲ್ಲಿ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ : ಮನಪಾ ಸಹಾಯಕ ಟೌನ್ ಪ್ಲಾನಿಂಗ್ ಆಫೀಸರ್ ಗೆ 5 ವರ್ಷ ಸಜೆ, 34 ಲಕ್ಷ ರೂ. ದಂಡ
ಪೊಲೀಸ್ ನಿರೀಕ್ಷಕ ನವೀನ್ ಚಂದ್ರ ಜೋಗಿ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದರು. ಭಾರತಿ ಜಿ. ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಬಿ.ಜಕಾತಿ, ಪದ್ಮನಾಭ ಮೇಲಿನ ಆರೋಪ ಸಾಬೀತಾಗಿದೆ ಎಂದು ಆದೇಶಿಸಿದರು.
ಅಪರಾಧಿ ಅಧಿಕಾರಿಗೆ 4 ವರ್ಷ ಸಾದಾ ಸಜೆ ಹಾಗೂ ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲನಾದಲ್ಲಿ ಮತ್ತೆ 6 ತಿಂಗಳ ಕಾಲ ಸಾದಾ ಸಜೆ ವಿಧಿಸಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ವಾದ ಮಂಡಿಸಿದರು.
ಗ್ರಾಮ ಕರಣಿಕನಿಗೆ ನಾಲ್ಕು ವರ್ಷ ಸಜೆ: ಅಕ್ರಮ ಸಕ್ರಮದ ಅರ್ಜಿ ವಿಲೇವಾರಿಗಾಗಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ, ಗ್ರಾಮಕರಣಿಕನ ಮೇಲಿನ ಆರೋಪ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿಗೆ ನಾಲ್ಕು ವರ್ಷಗಳ ಸಾದಾ ಸಜೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿದೆ.
ಸುಳ್ಯದ ಮಂಡೆಕೋಲು ಗ್ರಾಮದ ಗ್ರಾಮಕರಣಿಕ ಎಸ್.ಮಹೇಶ್ ಶಿಕ್ಷೆಗೊಳಗಾದ ಅಪರಾಧಿ. ಎಸ್.ಮಹೇಶ್ ಅಕ್ರಮ ಸಕ್ರಮದ ಅರ್ಜಿಯ ವಿಲೇವಾರಿಗೆ ಮಂಡೆಕೋಲು ನಿವಾಸಿ ಗೋಪಾಲಕೃಷ್ಣ ಅವರಿಂದ 60 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 2016ರ ಜೂ.7 ರಂದು 45 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದರು. ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಲಂಚ ಸ್ವೀಕರಿಸಿದ ಆರೋಪ ಸಾಬೀತು: ಗ್ರಾಮಕರಣಿಕನಿಗೆ ನಾಲ್ಕು ವರ್ಷ ಸಜೆ, 70 ಸಾವಿರ ರೂ ದಂಡ..