ಮಂಗಳೂರು: ನಗರದ ಆಶಿಶ್ ಡಿಸೋಜಾ (13) ಎಂಬ ಬಾಲಕ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಸಾವಿಗೀಡಾಗಿದ್ದು, ಪೋಷಕರು ಶೋಕದಲ್ಲೂ ಮಗನ ಅಂಗಾಂಗ ದಾನ ಮಾಡಿದ್ದಾರೆ. ಬಾಲಕನ ತಂದೆ, ತಾಯಿಯ ನಿರ್ಧಾರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶ್ಲಾಘಿಸಿದ್ದಾರೆ.
ಪುತ್ರ ಶೋಕದಲ್ಲೂ ತಂದೆ ಆಶಿಶ್ ಅಲ್ಫೋನ್ಸ್ ಹಾಗು ತಾಯಿ ಸೋನಿಯಾ ಡಿಸೋಜಾ ಅಂಗಾಂಗ ದಾನ ಮಾಡುವ ಶ್ರೇಷ್ಠ ನಿರ್ಧಾರ ತೆಗೆದುಕೊಂಡಿದ್ದಾರೆ. ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಜ್ವರದಿಂದ ಗುಣಮುಖರಾಗಿದ್ದ ಆಶಿಶ್, ಇನ್ನೇನು ಮನೆಗೆ ತೆರಳಲು ತಯಾರಿ ನಡೆಸುವ ಸಂದರ್ಭದಲ್ಲೇ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದರು.
ಅಲ್ಫೋನ್ಸ್ ಹಾಗು ಸೋನಿಯಾ ಡಿಸೋಜಾ ತಮ್ಮ ಪುತ್ರನೆದುರು ಅಂಗಾಂಗ ದಾನದ ಮಹತ್ವದ ಬಗ್ಗೆ ಸದಾ ಮಾತನಾಡುತ್ತಿದ್ದರಂತೆ. ತಾವು ನಿಧನರಾದರೆ ತಮ್ಮ ಅಂಗಾಂಗಗಳನ್ನು ದಾನ ಮಾಡುವಂತೆ ದಂಪತಿ ತಮ್ಮ ಮಕ್ಕಳಿಗೆ ಸೂಚನೆ ನೀಡಿದ್ದರಂತೆ. ಆದರೆ, ತಮ್ಮ ಕಣ್ಣೆದುರೇ ಪುತ್ರನ ಸಾವು ನೋಡಬೇಕಾಗಿ ಬಂದಿದೆ. ಅತ್ಯಂತ ನೋವಿನ ಸಂದರ್ಭದಲ್ಲೂ ತಾವು ಪಾಲಿಸಲೇಬೇಕು ಎಂದುಕೊಂಡಿದ್ದ ಆದರ್ಶ ಮರೆಯದೆ ಅಲ್ಫೋನ್ ಮತ್ತು ಸೋನಿಯಾ ಡಿಸೋಜಾ, ಪುತ್ರನ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಆಶಿಶ್‌ನ ಎರಡು ಕಣ್ಣುಗಳ ಜತೆಗೆ ದೇಹದಾನ ಮಾಡಿದ್ದಾರೆ. ದಂಪತಿಯ ಮಾನವೀಯ ಕಾರ್ಯ ಮಾದರಿಯಾಗಿದ್ದು, ಇತರರಿಗೆ ಪ್ರೇರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಮಂಗಳೂರಿನಲ್ಲಿ ಕುಟುಂಬದ ಮನೆಗೆ ತೆರಳಿದ ಸಚಿವರು ಸಾಂತ್ವನ ಹೇಳಿದ್ದಾರೆ.
ಇದನ್ನೂಓದಿ: ಆಧಾರರಹಿತ ಆರೋಪ ಮಾಡುವುದು ಬಿಜೆಪಿಯ ಚಾಳಿ: ಸಚಿವ ದಿನೇಶ್ ಗುಂಡೂರಾವ್