ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ಹಸ್ತಾಂತರಿಸಿದ್ದಾರೆ. ನವೆಂಬರ್ 19ರಂದು ಮಂಗಳೂರಿನ ಗರೋಡಿಯಲ್ಲಿ ಶಂಕಿತ ಉಗ್ರ ಶಾರೀಕ್ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯುತ್ತಿದ್ದಾಗ ಸ್ಫೋಟಗೊಂಡಿತ್ತು. ಪ್ರಕರಣ ನಡೆದ ಮರುದಿನದಿಂದಲೇ ಎನ್ಐಎ ಅಧಿಕಾರಿಗಳು ಪೊಲೀಸರ ಜೊತೆಗೆ ವಿಚಾರಣೆ ನಡೆಸುತ್ತಿದ್ದರು.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ಮೂಲಕ ಮಂಗಳೂರು ಪೊಲೀಸರಿಂದ ಎನ್ಐಎ ಪಡೆದುಕೊಂಡಿದೆ. ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಪ್ರಕರಣದ ವಿಚಾರಣೆಯನ್ನು ನಗರ ಪೊಲೀಸ್ ಆಯುಕ್ತರು ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಗ್ರ ಶಾರೀಕ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆತನ ಆರೋಗ್ಯ ಸುಧಾರಣೆಯಾಗುತ್ತಿದ್ದು, ಖುದ್ದು ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಹೇಳಿಕೆಯನ್ನು ದಾಖಲಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ ಪಿ.ಎ ಹೆಗ್ಡೆ ಎದುರು ಹೇಳಿಕೆ ನೀಡಲಾಗಿದೆ. ಇಂದಿನಿಂದ ಎನ್ಐಎ ಅಧಿಕಾರಿಗಳು ಆರೋಪಿಯ ಹೇಳಿಕೆ ಪಡೆಯಲಿದ್ದಾರೆ.
ಪೊಲೀಸರಿಂದ ದಾಖಲೆ ಪಡೆದ ಎನ್ಐಎ: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಬಂದ ಎನ್ಐಎ ಅಧಿಕಾರಿಗಳು ಪ್ರಕರಣ ಸಂಬಂಧ ನಡೆದ ತನಿಖೆಗಳ ಮಾಹಿತಿ ಪಡೆದಿದ್ದಾರೆ. ಮೂರು ಮಂದಿ ಅಧಿಕಾರಿಗಳು ಆಗಮಿಸಿ ದಾಖಲೆ ಪಡೆದು, ಆಯುಕ್ತ ಶಶಿಕುಮಾರ್ ಅವರಲ್ಲಿ ಚರ್ಚಿಸಿ ತೆರಳಿದ್ದಾರೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ತಮಿಳುನಾಡಿನಲ್ಲಿ ಶಾರಿಕ್ ಹೆಜ್ಜೆ ಗುರುತು ಶೋಧ