ಮಂಗಳೂರು: ಪ್ರವಾದಿ ಅವರ ಅವಹೇಳನ ಮಾಡಿದ ಘಟನೆಯ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಯಂತೆ ಮಂಗಳೂರಿನಲ್ಲಿಯೂ ಭಾರಿ ಪ್ರತಿಭಟನೆ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಯುಕ್ತರಾದ ಶಶಿಕುಮಾರ್ ಮಂಗಳೂರು ನಗರ ವ್ಯಾಪ್ತಿಗೆ ಸೇರಿದ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಿ ಮಾತುಕತೆ ನಡೆಸಿದರು. ಪ್ರತಿಯೊಂದು ಮಸೀದಿಯ ಆಡಳಿತ ಸಮಿತಿಯ ಮುಖಂಡರೊಂದಿಗೆ ಸಭೆ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಚುರವಾಗುತ್ತಿರುವ ಭಾರಿ ಪ್ರತಿಭಟನೆ ಮಾಡಲಾಗುವ ಸಂದೇಶದ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಧಾರ್ಮಿಕ ಮುಖಂಡರು ಈ ರೀತಿಯ ಪ್ರತಿಭಟನೆಯ ಯಾವುದೇ ಚಿಂತನೆ ತಮ್ಮಲ್ಲಿ ಇಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಹಿಜಾಬ್, ಆಜಾನ್ ಮೊದಲಾದ ವಿಚಾರಗಳ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಶಾಂತಿ ಕಾಪಾಡಿರುವ ಬಗ್ಗೆ ಮುಸ್ಲಿಂ ಮುಖಂಡರು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಸಭೆ ಬಳಿಕ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಯಾವುದೇ ಊಹಾಪೋಹಗಳಿಗೆ ಕಿವಿಗೊಡದಂತೆ ಮತ್ತು ಹಿತಾಸಕ್ತಿಪೂರಿತ ಸಂದೇಶಗಳಿಗೆ ಸ್ಪಂದಿಸಬಾರದು ಎಂದು ಮುಸ್ಲಿಂ ಮುಖಂಡರ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಮುಖಂಡರು ತಾವು ಯಾವುದೇ ಪ್ರತಿಭಟನೆಯ ಕರೆ ನೀಡಿಲ್ಲ. ಆಂತರಿಕ ವಲಯದಲ್ಲಿಯೂ ಈ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. 2022ರಲ್ಲಿ ಯಾವುದೇ ದೊಡ್ಡ ಪ್ರತಿಭಟನೆ ಆಗದೆ ಇರುವುದರಿಂದ ಮಂಗಳೂರು ಧಾರ್ಮಿಕ ಮುಖಂಡರಿಂದ ಪ್ರತಿಭಟನೆಗೆ ನಿರ್ಧಾರ ಎಂದು ಸಂದೇಶದ ಬಗ್ಗೆ ತಿಳಿಸಿದಾಗ ಎಲ್ಲರೂ ಅಂತಹ ನಿರ್ಧಾರ ಆಗಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಸ್ಲಿಂ ಧಾರ್ಮಿಕ ಮುಖಂಡ, ಆಯುಕ್ತರು ಮುತುವರ್ಜಿಯಿಂದ ನಡೆಸಿದ ಸಭೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಅಹಿತಕರ ವಿಚಾರಗಳು ನಡೆದಿದ್ದು, ಇದರ ಬಗ್ಗೆ ಚರ್ಚೆ ನಡೆಯಿತು. ಈ ರೀತಿಯ ಸಭೆ ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಸೇರಿಸಿಕೊಂಡು ಮಾಡಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕೊಪ್ಪಳ: ಮಾರಾಮಾರಿಗೆ ಕಾರಣವಾದ ಯುವಕ-ಯುವತಿಯ ಪ್ರೇಮ ಪ್ರಕರಣ