ಮಂಗಳೂರು: ಮನಪಾ ವ್ಯಾಪ್ತಿಯಲ್ಲಿ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಕುಡಿವ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕೆಂಬ ಇರಾದೆ ಇದೆ. ಆದ್ರೆ ಕುಡಿವ ನೀರಿನ ದರ ನಿರ್ಣಯ ಮಾಡುವ ಅಧಿಕಾರ ಸರಕಾರಕ್ಕೆ ಮಾತ್ರ ಇದೆ. ಆದ್ದರಿಂದ ಮನಪಾ ಸದಸ್ಯರ ಬೇಡಿಕೆ ಗಂಭೀರವಾಗಿ ಪರಿಗಣಿಸಿ ಸಭೆಯಲ್ಲಿ ಮಾಡಿರುವ ತೀರ್ಮಾನವನ್ನು ಸರ್ಕಾರ ಬಳಿ ಅನುಷ್ಠಾನ ಮಾಡಬೇಕೆಂಬ ಕೋರಿಕೆಯನ್ನು ಸಲ್ಲಿಸುತ್ತೇನೆ ಎಂದು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ನಗರದ ಮನಪಾ ಮಂಗಳಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ರೀತಿಯ ನಿರ್ಣಯಗಳನ್ನು ನೇರವಾಗಿ ಅನುಷ್ಠಾನ ಮಾಡಲು ಪಾಲಿಕೆಯಿಂದ ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಶಾಸಕರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಜಲಸಿರಿ ಯೋಜನೆಯಡಿ ಈಗಿರುವ ನೀರಿನ ವಿತರಣೆ ಬಲ ಪಡಿಸುವುದು ಹಾಗೂ ಮುಂದಿನ 8 ವರ್ಷಕ್ಕೆ ನಿರ್ವಹಣೆಗೆ ನೀಡುವ ಗುತ್ತಿಗೆಯನ್ನು ಕೂಡಾ ನಾವು ಅಂತಿಮ ಮಾಡಿದ್ದೇವೆ. ಅದರ ಒಪ್ಪಂದಕ್ಕೆ ಕೂಡಾ ಈಗಾಗಲೇ ಸಹಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ನೀರಿನ ದರ ಕಡಿಮೆ ಮಾಡುವ ಬಗ್ಗೆ 2020ರ ಅಕ್ಟೋಬರ್ನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಈ ಬಗ್ಗೆ ನಮಗೆ ಮೇ ತಿಂಗಳಲ್ಲಿ ಸರ್ಕಾರದಿಂದ ಒಂದು ಪತ್ರ ಬಂದಿದೆ. ಅದರಲ್ಲಿ ನೀರಿನ ದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ ಎಂದು ಹೇಳಿದರು.
ಮನಪಾ ಹೇಳುವುದನ್ನು ಸರ್ಕಾರ ಕೇಳುತ್ತಿಲ್ಲ ಎಂದರೆ ಏನು ಅರ್ಥ?. ಯಾಕೆ ಮನಪಾದ ಆಡಳಿತ ಪಕ್ಷ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯಬಾರದು ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮನಪಾ ನಾಮ ನಿರ್ದೇಶಿತ ಸದಸ್ಯ ರಾಧಾಕೃಷ್ಣ ಅವರು ಪ್ರತಿಕ್ರಿಯಿಸಿ ವಿರೋಧ ಪಕ್ಷದವರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು. ಇದರಿಂದ ಏಕಾಏಕಿ ವಿರೋಧ ಪಕ್ಷದ ಸದಸ್ಯರು ರಾಧಾಕೃಷ್ಣ ಅವರ ಮೇಲೆ ಹರಿಹಾಯ್ದು ಗದ್ದಲ ಎಬ್ಬಿಸಿದರು.
ಮಂಗಳ ಕ್ರೀಡಾಂಗಣ ಸಮಸ್ಯೆ
ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಂಗಳಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಪೊಲೀಸ್ ತರಬೇತಿ ನಡೆಯುತ್ತಿರುವುದರಿಂದ ಕ್ರೀಡಾಳುಗಳಿಗೆ ತರಬೇತಿ ಪಡೆಯಲು ಅನಾನುಕೂಲ ಆಗುತ್ತಿದೆ ಎಂದು ಹೇಳಿದರು. ಈ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಂಗಳಾ ಕ್ರೀಡಾಂಗಣ ಸ್ಮಾರ್ಟ್ ಸಿಟಿ ಮನಪಾದಿಂದ ಅಭಿವೃದ್ಧಿಯಾಗುತ್ತಿದೆ. ಆದರೆ, ಆ ಬಳಿಕ ಅದು ಮನಪಾ ಅಧೀನದಲ್ಲಿರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಮನಪಾ ಸಹ ಭಾಗಿತ್ವವೂ ಇರುವಂತೆ ವ್ಯವಸ್ಥೆ ಮಾಡಬೇಕೆಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಅವರಿಗೆ ತಿಳಿಸಿದರು.
ಟೈಗರ್ ಕಾರ್ಯಾಚರಣೆ
ಗೂಡಂಗಡಿ ತೆರವು ಮಾಡಲು ಟೈಗರ್ ಕಾರ್ಯಾಚರಣೆ ನಡೆಯುತ್ತಿಲ್ಲ. ಇದರಿಂದ ನಗರ ಸ್ವಚ್ಚತೆಗೂ, ಪುಟ್ಪಾತ್ ಗಳಿಗೂ ತೊಂದರೆಯಾಗುತ್ತಿದೆ ಎಂದು ಹೆಚ್ಚಿನ ಸದಸ್ಯರು ಮೇಯರ್ ಗೆ ದೂರಿತ್ತರು. ಈ ಬಗ್ಗೆ ಮನಪಾ ಅಧಿಕಾರಿಗಳಲ್ಲಿ ಟೈಗರ್ ಕಾರ್ಯಾಚರಣೆ ನಡೆಯದಿರುವ ಬಗ್ಗೆ ವಿಚಾರಿಸಿದಾಗ ಮನಪಾ ಉಪ ಆಯುಕ್ತ ಬಿನೋಯ್ ಮಾತನಾಡಿ, ಅದಕ್ಕೆ ಬೇಕಾದ ಜೆಸಿಬಿ, ಲಾರಿ, ಟ್ರಕ್ ಗಳ ಕೊರತೆಯಿದೆ ಎಂದು ಹೇಳಿದರು.
ಆಗ ಮೇಯರ್ ಇದನ್ನು ನಮ್ಮ ಗಮನಕ್ಕೆ ಯಾಕೆ ತರಲಿಲ್ಲವೆಂದು ತರಾಟೆಗೆ ತೆಗೆದುಕೊಂಡರು. ಆಗ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಧ್ಯಪ್ರವೇಶಿಸಿ ಎಲ್ಲ ಸೌಕರ್ಯಗಳೂ ಇವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಟೈಗರ್ ಕಾರ್ಯಾಚರಣೆ ನಡೆಯುತ್ತಿಲ್ಲ. ನಾಳೆಯಿಂದಲೇ ಮತ್ತೆ ಈ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದರು.