ಮಂಗಳೂರು: ನಗರದ ಗರೋಡಿಯಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಘಟನೆ ನಡೆದ ಸಮೀಪದಲ್ಲಿ ತರಕಾರಿ ಅಂಗಡಿ ಹೊಂದಿರುವ ಪ್ರತ್ಯಕ್ಷದರ್ಶಿ ಸುಭಾಷ್ ಶೆಟ್ಟಿ, ಸ್ಫೋಟ ಆದಾಗ ದೊಡ್ಡ ಪ್ರಮಾಣದ ಪಟಾಕಿ ಹೊಡೆದಂಥ ಶಬ್ದ ಕೇಳಿಬಂತು ಎಂದು ತಿಳಿಸಿದ್ದಾರೆ. ಏನದು ಶಬ್ದ ಎಂದು ನೋಡಲು ಹೋದಾಗ ದಟ್ಟ ಹೊಗೆ ಕಂಡು ಬಂದಿತ್ತು. ರಿಕ್ಷಾ ಚಾಲಕ ಹಾಗೂ ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿದೆ. ತಕ್ಷಣ ನಾವು ಅವರನ್ನು ಆಟೋವೊಂದರಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿದೆವು. ಸಂಜೆ 4.30 ರಿಂದ 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿತು ಎಂದರು.
ಸ್ಪೋಟದ ತೀವ್ರತೆಗೆ ಆಟೋ ಡ್ರೈವರ್ ತಲೆಕೂದಲು ಸಂಪೂರ್ಣ ಸುಟ್ಟು ಹೋಗಿದೆ. ಆತನ ಕೈಯಲ್ಲೂ ಸುಟ್ಟ ಗಾಯಗಳಾಗಿವೆ. ಪ್ರಯಾಣಿಕ ಡಬ್ಬಲ್ ಶರ್ಟ್ ಹಾಕಿದ್ದು, ಮೇಲಿನ ಶರ್ಟ್ ಸಂಪೂರ್ಣ ಸುಟ್ಟು ಹೋಗಿತ್ತು. ಒಳಗಿನ ಶರ್ಟ್ಗೂ ಬೆಂಕಿ ಹತ್ತಿದ್ದು, ಅದನ್ನು ಎಳೆದು ಹರಿದು ಹಾಕಿದ್ದೇವೆ. ಬಳಿಕ ಅವನ ಮೈಮೇಲಿದ್ದ ಬೆಂಕಿ ನಂದಿಸಲು ನೀರು ಹಾಕಿದ್ದೆವು. ಬಳಿಕ ಕಂಕನಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ವಿವರಿಸಿದರು.
ಆಟೋ ಡ್ರೈವರ್ ನನಗೆ ಪರಿಚಿತರು. ಅವರು ಪ್ರಯಾಣಿಕನನ್ನು ಕಂಕನಾಡಿ ಜಂಕ್ಷನ್ನಲ್ಲಿ ಆಟೋಗೆ ಹತ್ತಿಸಿದ್ದೆ ಎಂದು ಹೇಳಿದ್ದರು. ಮೊದಲಿಗೆ ನಾವು ಆಟೋದ ಗ್ಯಾಸ್ ಸಿಲಿಂಡರ್ ಒಡೆದು ಹೋಗಿತ್ತೆಂದು ಅಂದುಕೊಂಡಿದ್ದೆವು. ಆ ಬಳಿಕ ನೋಡಿದಾಗ ಆಟೋದಲ್ಲಿ ಕುಕ್ಕರ್, ವೈರ್ಗಳು ಹಾಗೂ ಸಣ್ಣ ಸಣ್ಣ ಬ್ಯಾಟರಿಗಳಿದ್ದವು. ಇದು ಉಗ್ರರ ಕೃತ್ಯವೋ ಎಂಬುದು ನನಗೆ ಗೊತ್ತಿಲ್ಲ. ಇದೆಲ್ಲವೂ ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ, ಸಿಸಿಟಿವಿಯಲ್ಲಿ ದೃಶ್ಯ ಸೆರೆ