ಮಂಗಳೂರು(ದಕ್ಷಿಣ ಕನ್ನಡ): ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2023ರ ಡಿಸೆಂಬರ್ ತಿಂಗಳಲ್ಲಿ 2.03 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಡಿಸೆಂಬರ್ 31ರಂದು ಒಂದೇ ದಿನ 7,548 ಜನರನ್ನು ನಿಲ್ದಾಣ ನಿರ್ವಹಣೆ ಮಾಡಿದೆ. ನವೆಂಬರ್ 25ರಂದು 7,468 ಪ್ರಯಾಣಿಕರು ಸಂಚರಿಸಿದ್ದು ಈ ವರ್ಷದ ದಾಖಲೆಯಾಗಿತ್ತು.
ವಿಮಾನ ನಿಲ್ದಾಣವು ಡಿಸೆಂಬರ್‌ನಲ್ಲಿ 12 ದಿನ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ. ಇದೀಗ ಇದಕ್ಕೂ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಬಹುಪಾಲು ಡಿಸೆಂಬರ್ 9-10, 16-17, 23-25 ಮತ್ತು 30-31ರ ವಾರಾಂತ್ಯದಲ್ಲಿ ದಾಖಲಾಗಿದೆ. ಕ್ರಿಸ್ಮಸ್ಗೆ ಮುಂಚಿನ ಮೂರು ದಿನಗಳಲ್ಲಿ ಕ್ರಮವಾಗಿ 7089, 7220 ಮತ್ತು 7034 ಪ್ರಯಾಣಿಕರನ್ನು ನಿರ್ವಹಿಸಲಾಗಿದೆ. 2023ರ ನವೆಂಬರ್ನಲ್ಲಿ 1.78 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ.
"ಹೆಚ್ಚುತ್ತಿರುವ ಸಂಖ್ಯೆಗಳು, ವಿವಿಧ ಸವಾಲುಗಳ ಹೊರತಾಗಿಯೂ ವಾಯುಯಾನ ಪ್ರಯಾಣ ದೇಶೀಯ ಮತ್ತು ಅಂತರರಾಷ್ಟ್ರೀಯವಾಗಿ ಬೆಳೆಯುತ್ತಿದೆ ಎಂಬುದರ ಸ್ಪಷ್ಟ ಸೂಚನೆ. ನಿಲ್ದಾಣವು ಈ ಬೆಳವಣಿಗೆಯಲ್ಲಿ ತನ್ನ ಪಾತ್ರವಹಿಸಲು ಹೆಮ್ಮೆಪಡುತ್ತದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೊ ಸಂಸ್ಥೆಗಳದ್ದೂ ಕೂಡ ಈ ದಾಖಲೆಯಲ್ಲಿ ಪಾತ್ರವಿದೆ" ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದರು.
ಚಳಿಗಾಲದ ವೇಳಾಪಟ್ಟಿ ಜಾರಿಗೆ ಬಂದ ಅಕ್ಟೋಬರ್ 29ರಿಂದ ವಾಯು ಸಂಚಾರ ಚಲನೆಯಲ್ಲಿ (ಎಟಿಎಂ) ಸಾಮಾನ್ಯ ಹೆಚ್ಚಳ ಗಮನಿಸಲಾಗಿದೆ. 2023ರ ಡಿಸೆಂಬರ್‌ನಲ್ಲಿ 1,388 ಎಟಿಎಂಗಳು ದಾಖಲಾಗಿದ್ದು, ಇದರಲ್ಲಿ 1096 ದೇಶೀಯ ಚಲನೆಗಳು ಸೇರಿವೆ.
ಇದನ್ನೂ ಓದಿ: ಮಾಲ್ಡಾದಿಂದ ಬೆಂಗಳೂರು ತಲುಪಿದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು