ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಪದವಿ ಪರೀಕ್ಷೆ ಎಪ್ರಿಲ್ 1 ರಿಂದ ಆರಂಭವಾಗಿದ್ದು, ಹಾಲ್ ಟಿಕೆಟ್ ಇಲ್ಲದೆ ಐಡಿ ಕಾರ್ಡ್ ತೋರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಫ್ಟ್ವೇರ್ ಸಮಸ್ಯೆಯಿಂದ ಹಾಲ್ ಟಿಕೆಟ್ ನೀಡಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ಹಾಲ್ ಟಿಕೆಟ್ ಬದಲಿಗೆ ಐಡಿ ಕಾರ್ಡ್ ತೋರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಎಪ್ರಿಲ್ 1 ರಂದು ವಿದ್ಯಾರ್ಥಿಗಳು ಐಡೆಂಟಿಟಿ ಕಾರ್ಡ್ ತೋರಿಸಿ ಪರೀಕ್ಷೆ ಬರೆದಿದ್ದು, ನಾಳೆ ನಡೆಯುವ ಪರೀಕ್ಷೆಯನ್ನು ಕೂಡ ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಬರೆಯಲಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಪಿ.ಎಲ್.ಧರ್ಮ ಅವರು, ಸಾಫ್ಟ್ವೇರ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲು ಸಮಸ್ಯೆಯಾಗಿದೆ. ಹಾಲ್ ಟಿಕೆಟ್ ಬದಲಿಗೆ ಕಾಲೇಜಿನ ಐಡಿ ಕಾರ್ಡ್ ತೋರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಗುರುವಾರ ವಿದ್ಯಾರ್ಥಿಗಳು ಐಡಿ ಕಾರ್ಡ್ ತೋರಿಸಿ ಪರೀಕ್ಷೆ ಬರೆದಿದ್ದು, ನಾಳೆ ಕೂಡ ಅದೇ ರೀತಿ ಪರೀಕ್ಷೆ ಬರೆಯಲಿದ್ದಾರೆ.
ಇದನ್ನೂ ಓದಿ: ಪ್ರತಾಪ್ಗೌಡ ಪರ ಸಿಎಂ ಪುತ್ರನ ಭರ್ಜರಿ ಮತ ಬೇಟೆ
ಇದೀಗ ಸಾಫ್ಟ್ ವೇರ್ ಸಮಸ್ಯೆ ಬಗೆಹರಿಯುತ್ತಿದ್ದು, ಸೋಮವಾರದ ವೇಳೆಗೆ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ದೊರೆಯಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪಟ್ಟಿಯನ್ನು ಈಗಾಗಲೇ ಕಾಲೇಜುಗಳಿಗೆ ನೀಡಲಾಗಿದ್ದು, ಯಾವುದೇ ಸಮಸ್ಯೆಯಿಲ್ಲದೆ ಪರೀಕ್ಷೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.