ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 41 ನೇ ಘಟಿಕೋತ್ಸವ ಕಾರ್ಯಕ್ರಮ ಇಂದು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರಮಾಣಪತ್ರ ವಿತರಿಸಿದರು. ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಮಾಡಿದ ಸಾಧನೆಗಾಗಿ ಮಂಗಳೂರಿನ ಕಣಚೂರ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಜಿ ಯು.ಕೆ.ಮೋನು, ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಉದ್ಯಮಿ ಜಿ ರಾಮಕೃಷ್ಣ ಆಚಾರ್ ಹಾಗೂ ಶಿಕ್ಷಣ ಮತ್ತು ಸಮಾಜಸೇವೆಗಾಗಿ ರಾಜ್ಯೋತ್ಸವ ಪುರಸ್ಕಾರ ಪುರಸ್ಕೃತ ಪ್ರೊ. ಎಂ.ಬಿ. ಪುರಾಣಿಕ್ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಿದರು.
ಈ ಬಾರಿ ಏಳು ಮಂದಿ ವಿದೇಶಿಗರೂ ಸೇರಿದಂತೆ 115 ಮಂದಿಗೆ ಪಿ.ಹೆಚ್.ಡಿ ಪದವಿಯನ್ನು ಪ್ರದಾನ ಮಾಡಲಾಯಿತು. 55 ಮಂದಿಗೆ ಚಿನ್ನದ ಪದಕ, 57 ನಗದು ಬಹುಮಾನ ವಿತರಿಸಲಾಯಿತು. 199 ಮಂದಿ ರ‍್ಯಾಂಕ್ ವಿಜೇತರಲ್ಲಿ ಪ್ರಥಮ ರ್ಯಾಂಕ್ ಪಡೆದ 71 ಮಂದಿಗೆ ರಾಜ್ಯಪಾಲರು ರ‍್ಯಾಂಕ್ ಪ್ರಮಾಣಪತ್ರ ನೀಡಿದರು. ಶೈಕ್ಷಣಿಕ ವರ್ಷ 2021-22 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶೇಕಡಾ 82.72 ಪಲಿತಾಂಶ ದಾಖಲಾಗಿದೆ.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಷ್ಟ್ರದಲ್ಲೇ ಮೊದಲ ಬಾರಿಗೆ, ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಆದಷ್ಟು ಬೇಗನೆ ಕನ್ನಡದಲ್ಲಿ ತರುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀಯ ಭಾಷೆಯಲ್ಲೇ ಕಲಿತು ದೇಶದ ಅಭಿವೃದ್ಧಿಗೆ ವೇಗ ತುಂಬುವುದು ಇದರ ಉದ್ದೇಶವಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ತಜ್ಞರ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸ್ಥಳೀಯ ಭಾಷಾ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ದೇಶದಲ್ಲಿ ಕರ್ನಾಟಕ ಜಾರಿ ಮಾಡಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
'ಆತ್ಮನಿರ್ಭರ ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡಲು, ಆರ್ಥಿಕವಾಗಿ ಜಾಗತಿಕವಾಗಿ ಮುಂಚೂಣಿಗೆ ತರಲು ಯುವಜನರ ಪಾತ್ರ ಅಗತ್ಯ. ಸ್ವಾತಂತ್ರ್ಯದ ಅಮೃತಕಾಲ ನಮಗೆ ಕರ್ತವ್ಯದ ಕಾಲವಾಗಬೇಕು. ನಮ್ಮ ಜಲ, ವಾಯು, ಕಾಡಿನ ಸಂರಕ್ಷತೆ ಈಗಿನ ತುರ್ತು ಅಗತ್ಯವಾಗಿದೆ. ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದುಕೊಂಡು, ಒಬ್ಬರಿಗೊಬ್ಬರು ಹೆಗಲಾಗುವ ಮನೋಭಾವ ನಮ್ಮಲ್ಲಿ ಬೆಳೆಯಬೇಕಾಗಿದೆ ಎಂದರು.
ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮ, ವಿಶ್ವವಿದ್ಯಾಲಯ ಶಿಕ್ಷಣದ ಪರಿಕಲ್ಪನೆ ನಾವು ಅರ್ಥಮಾಡಿಕೊಳ್ಳಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವಾಗಿದೆ. ಅದು ನಮ್ಮ ಬಹುಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಪರಿಸರದೆಡೆಗೆ ಸ್ವಾರ್ಥರಹಿತ ಕಾಳಜಿ ನಮ್ಮಲ್ಲಿ ಬೆಳೆಯಬೇಕು ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ವಿಶ್ವವಿದ್ಯಾಲಯದ ಸಾಧನೆ, ಗುರಿಗಳನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ ಕೆ, ಕುಲಸಚಿವ (ಪರೀಕ್ಷಾಂಗ) ಪ್ರೊ. ರಾಜು ಕೃಷ್ಣ ಚಲನ್ನವರ್, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ನಿಖಾಯಗಳ ಡೀನ್ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಮತ್ತು ಪ್ರೀತಿ ಕೀರ್ತಿ ಡಿʼಸೋಜ ಕಾರ್ಯಕ್ರಮ ನಿರೂಪಿಸಿದರು.
ಪಿಹೆಚ್ಡಿ ಪಡೆದ 80 ವರ್ಷದ ವ್ಯಕ್ತಿ: ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 80 ವರ್ಷದ ವೃದ್ಧರೊಬ್ಬರು ಪಿಹೆಚ್ಡಿ ಪಡೆದುಕೊಂಡದ್ದು ಗಮನಸೆಳೆಯಿತು. ಮಂಡ್ಯದ ಪ್ರಭಾಕರ್ ಕುಪ್ಪಹಳ್ಳಿ ಅವರು ಇಂದು ರಾಜ್ಯಪಾಲರಿಂದ ಪಿಹೆಚ್ಡಿ ಪದವಿ ಸ್ವೀಕರಿಸಿದರು. ಇವರು 15 ವರ್ಷ ಅಮೆರಿಕದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೆಟಿರಿಯಲ್ ಸೈನ್ಸ್ ಎಂಬ ವಿಷಯದಲ್ಲಿ ಅವರು ಪಿಹೆಚ್ಡಿ ಪದವಿಯನ್ನು ಪಡೆದಿದ್ದಾರೆ.
ಇಬ್ಬರಿಗೆ ಪದವಿಯಲ್ಲೂ, ಪಿಜಿಯಲ್ಲೂ ರ‌್ಯಾಂಕ್: ಇಂದು ನಡೆದ ಘಟಿಕೋತ್ಸವದಲ್ಲಿ ರ‌್ಯಾಂಕ್ ಸ್ವೀಕರಿಸಿದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿಯಲ್ಲಿಯೂ ರ‌್ಯಾಂಕ್ ವಿಜೇತರಾಗಿದ್ದರು. ಮಂಗಳೂರು ವಿವಿ ಕಾಲೇಜಿನಲ್ಲಿ ಎಂಎ (ಇತಿಹಾಸ ಮತ್ತು ಪುರಾತತ್ವ) ಯಲ್ಲಿ ಪ್ರಥಮ ರ್ಯಾಂಕ್ ಪಡೆದ ಸಾಯಿಸೂರ್ಯ ಕೆ ಪಿ ಅವರು ಪದವಿಯಲ್ಲಿಯೂ ರ‌್ಯಾಂಕ್ ಪಡೆದಿದ್ದರು. ಅದೇ ರೀತಿ ಪ್ರಿಯದರ್ಶಿನಿ ಎಂಬ ವಿದ್ಯಾರ್ಥಿನಿ ಸ್ನಾತಕೋತ್ತರ ಪದವಿಯಲ್ಲಿ ರ‌್ಯಾಂಕ್ ಪಡೆದಿದ್ದು, ಇವರು ಪದವಿಯಲ್ಲೂ ರ‌್ಯಾಂಕ್ ಪಡೆದಿದ್ದರು.
ಪಿಹೆಚ್ಡಿ ಪದವಿ ಪಡೆದ ಪೋಲಿಯೋ ಪೀಡಿತ ವ್ಯಕ್ತಿ: ಇಂದಿನ ಘಟಿಕೋತ್ಸವದಲ್ಲಿ ಪೋಲಿಯೋ ಪೀಡಿತ ವ್ಯಕ್ತಿ ಪಿಹೆಚ್ಡಿ ಪದವಿಯನ್ನು ರಾಜ್ಯಪಾಲರಿಂದ ಸ್ವೀಕರಿಸಿದರು. ಉಡುಪಿ ಜಿಲ್ಲೆಯ ದಿನಕರ್ ಕೆಂಜೂರು ಪೋಲಿಯೋ ಪೀಡಿತರಾಗಿದ್ದು, ಬಾಲ್ಯದಿಂದಲೂ ಒಂದು ಕಾಲಿನಲ್ಲಿ ಬಲವಿಲ್ಲದೆ ಶಿಕ್ಷಣ ಪೂರೈಸಿದ್ದರು. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎ ಕಾಮರ್ಸ್ ಮಾಡಿದ್ದರು. ಇದೀಗ ಮಂಗಳೂರು ವಿವಿಯಲ್ಲಿ ಕಾಮರ್ಸ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ಪಿಹೆಚ್ಡಿ ಪಡೆದುಕೊಂಡಿದ್ದಾರೆ. ಅವರು ನಿತ್ಯ ಬಳಸುವ ಉರುಗೋಲು ಮೂಲಕವೇ ವೇದಿಕೆಗೆ ಬಂದು ಪಿಹೆಚ್ಡಿ ಸ್ವೀಕರಿಸಿದರು.
ಇದನ್ನೂ ಓದಿ: ಗುಲ್ಬರ್ಗಾ ವಿವಿ 36ನೇ ಅಂತರ ವಿಶ್ವವಿದ್ಯಾಲಯ ದಕ್ಷಿಣ ಪೂರ್ವ ವಲಯ ಬೃಹತ್ ಯುವಜನೋತ್ಸವಕ್ಕೆ ಚಾಲನೆ