ಮಂಗಳೂರು : ಉದ್ಯಮಿಗಳಾದ ಯು ಕೆ ಮೋನು ಮತ್ತು ಜಿ ರಾಮಕೃಷ್ಣ ಆಚಾರ್ ಹಾಗೂ ವಿಶ್ವ ಹಿಂದೂ ಪರಿಷತ್ ರಾಜ್ಯ ಮುಖಂಡ ಎಂ ಬಿ ಪುರಾಣಿಕ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಈ ಬಾರಿಯ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ನಡೆಯಲಿದ್ದು ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ಉದ್ಯಮಿ ಹಾಜಿ ಯು.ಕೆ.ಮೋನು ಕಿರು ಪರಿಚಯ : ಉದ್ಯಮಿ ಹಾಜಿ ಯು.ಕೆ.ಮೋನು ಅವರು ಕಣಚೂರ್ ಗ್ರೂಪ್ ಆಫ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಕಣಚೂರು ಅಕಾಡೆಮಿ ಆಫ್ ಜನರಲ್ನ್ನು 2002ರಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸ್ಥಾಪಿಸಲಾಯಿತು. ಕಣಚೂರು ಪಬ್ಲಿಕ್ ಸ್ಕೂಲ್, ಕಣಚೂರ್ ಪ್ರಿ-ಯೂನಿವರ್ಸಿಟಿ ಕಾಲೇಜು , ಕಣಚೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್, ಕಣಚೂರ್ ಇನ್ಸ್ಟಿಟ್ಯೂಟ್ ಆಫ್ ವೈದ್ಯಕೀಯ ವಿಜ್ಞಾನ, ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಪಿ, ಕಣಚೂರ್ ಕಾಲೇಜ್ ಆಫ್ ನರ್ಸಿಂಗ್ ವಿಜ್ಞಾನ, ಕಣಚೂರ್ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಮತ್ತು ಕಣಚೂರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಅವರು ಸ್ಥಾಪಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಸಾಧನೆಗಳ ಜೊತೆಗೆ, ಹಾಜಿ ಯು.ಕೆ ಮೋನು ಅವರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದರ್ಗಾ ಅಸೋಸಿಯೇಶನ್ ಉಳ್ಳಾಲ, ಮಂಗಳೂರು, ಹಾಗೂ ಮೊಹಿದಿನ್ ಜುಮ್ಮಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ.ಎಂ.ಬಿ ಪುರಾಣಿಕ್ ಕಿರು ಪರಿಚಯ : ಪ್ರೊ.ಎಂ.ಬಿ ಪುರಾಣಿಕ್ ರಾಜ್ಯೋತ್ಸವ ಪುರಸ್ಕಾರ ಪುರಸ್ಕೃತರಾಗಿದ್ದು, ವಿಶ್ವ ಹಿಂದೂ ಪರಿಷತ್ ರಾಜ್ಯ ಮುಖಂಡರಾಗಿದ್ದಾರೆ. ಶಿಕ್ಷಣತಜ್ಞ, ಉದ್ಯಮಿ, ಸಮಾಜ ಸೇವಕರಾಗಿರುವ ಪ್ರೊ. ಎಂ.ಬಿ ಪುರಾಣಿಕ್ ಅವರು ಪ್ರಾಧ್ಯಾಪಕರಾಗಿ ಮತ್ತು ವಿಭಾಗ ಮುಖ್ಯಸ್ಥರಾಗಿ ಬೋಧನೆಯಲ್ಲಿ 34 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಜಿ ರಾಮಕೃಷ್ಣ ಆಚಾರ್ ಕಿರು ಪರಿಚಯ : ಗಂಗೊಳ್ಳಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ಜಿ ರಾಮಕೃಷ್ಣ ಆಚಾರ್ ಇಂದು ಉದ್ಯಮಿಯಾಗಿ ಬೆಳೆದಿದ್ದಾರೆ. ಕೇವಲ ರೂ. 25,000 ಬಂಡವಾಳ ಹೂಡಿ ಫ್ಯಾಬ್ರಿಕೇಶನ್ ಕಂಪನಿಯನ್ನು ಆರಂಭಿಸಿದ್ದಾರೆ. ಇದೀಗ ಇವರ ಸಂಸ್ಥೆಯ ವಹಿವಾಟು ರೂ. ವರ್ಷಕ್ಕೆ 250 ಕೋಟಿ ಇದ್ದು , ಸುಮಾರು 3000 ಕ್ಕೂ ಅಧಿಕ ಜನರಿಗೆ ಉದ್ಯೋಗವನ್ನು ನೀಡಿದ್ದಾರೆ.
ಮಂಗಳೂರು ವಿವಿ 41ನೇ ಘಟಿಕೋತ್ಸವ : ನಾಳೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ 41ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದೆ. ಇಲ್ಲಿನ ಮಂಗಳ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದ್ದು, ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ , ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಭಾವಹಿಸಲಿದ್ದಾರೆ. ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಪ್ರೊ. ಎಸ್.ಸಿ ಶರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ : ದಾವಣಗೆರೆ ವಿವಿ: ಚಿನ್ನದ ಪದಕ ಪಡೆಯುವಲ್ಲಿ ವಿದ್ಯಾರ್ಥಿನಿಯರ ಮೇಲುಗೈ