ಬೆಂಗಳೂರು: ಮಂಗಳೂರಿನ ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯ ತೆರವಿಗೆ ಸಂಬಂಧಿಸಿದ ಕಾಮಗಾರಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಘನತ್ಯಾಜ್ಯ ಘಟಕ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ಧ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮಂಗಳೂರು ಮಹಾನಗರ ಪಾಲಿಕೆ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯ ವಿಲೇವಾರಿ ಮಾಡಲು 73 ಕೋಟಿ ರೂಪಾಯಿ ಕಾಮಗಾರಿಗೆ ಸಿಎಂ ಅನುಮೋದನೆ ನೀಡಿದ್ದಾರೆ.
ಅಲ್ಲದೇ ಮಹಾನಗರ ಪಾಲಿಕೆ ಆಯುಕ್ತರು ಟೆಂಡರ್‌ದಾರರಿಗೆ ಮಾರ್ಚ್ 8ರಂದು ಒಪ್ಪಿಗೆ ಪತ್ರ ಸಹ ನೀಡಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ವಿಚಾರವಾಗಿ ಸರ್ಕಾರ ನಾಲ್ಕು ದಿನಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ಕಾಮಗಾರಿಯ ಪ್ರಗತಿ ವರದಿಯನ್ನು ಕಾಲ ಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಮಂಗಳೂರು ಪಾಲಿಕೆಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ನ್ಯಾಯಾಲಯದ ನಿರ್ದೇಶನದಂತೆ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ವಿಚಾರಣೆಗೆ ಖುದ್ದಾಗಿ ಹಾಜರಿದ್ದರು. ಅರ್ಜಿದಾರರ ಪರ ವಕೀಲ ಶ್ರೀಧರಪ್ರಭುವಾದ ಮಂಡಿಸಿದರು.
ಇದನ್ನೂ ಓದಿ: ರಾಣಿ ಚೆನ್ನಮ್ಮ ವಿವಿ 9ನೇ ಘಟಿಕೋತ್ಸವ: ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ