ಮಂಗಳೂರು: ನಗರದ ಕೊಣಾಜೆಯ ಯುವಕನೋರ್ವ ಮೈಸೂರು ಮೂಲದ ವಿದ್ಯಾರ್ಥಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು, ಬಳಿಕ ಸುಮಾರು 35 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ ಆರೋಪ ಪ್ರಕರಣದಲ್ಲಿ ಮಂಗಳೂರು ಪೊಲೀಸರೇಕೆ ದೂರು ದಾಖಲಿಸಿಕೊಂಡಿಲ್ಲ ಎಂದು ಸದನದಲ್ಲಿ ಎಂಎಲ್ಸಿ ತೇಜಸ್ವಿನಿ ಗೌಡ ಪ್ರಶ್ನಿಸಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಚಾರವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್.ಎನ್ ಸ್ಪಷ್ಟನೆ ನೀಡಿದ್ದು, ಸದನದಲ್ಲಿ ಚರ್ಚೆಯಾಗಿರುವ ಬಗ್ಗೆ ನಮಗೆ ತಿಳಿದಿಲ್ಲ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲೂ ಆಗುವುದಿಲ್ಲ. ಆದರೆ ಸಂತ್ರಸ್ತ ವಿದ್ಯಾರ್ಥಿನಿಯೇ ನೆರವಿಗೆ ಬಂದ ಪೊಲೀಸರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. ಈ ಬಗ್ಗೆ ಆರೋಪ ಮಾಡಿದವರೇ ಖುದ್ದಾಗಿ ಆಕೆಯಲ್ಲಿ ಮಾತನಾಡಿದರೆ ತಿಳಿದು ಬರುತ್ತದೆ ಎಂದು ಹೇಳಿದರು.
ಸೆ.21ರಂದು ಮಧ್ಯಾಹ್ನ ದೌರ್ಜನ್ಯ ಹಾಗೂ ವಂಚನೆಗೊಳಗಾದ ಯುವತಿ ವಂಚಿಸಿದ ಯುವಕನ ಮನೆಗೆ ಹೋಗಿದ್ದಳು. ಅಲ್ಲಿ ಆತನ ಕುಟುಂಬಸ್ಥರು ಇದ್ದು, ಅವರಲ್ಲಿ ಓರ್ವರು ಆಕೆಯ ಕಪಾಳಕ್ಕೆ ಹೊಡೆದು ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಅಲ್ಲಿಂದ ಆಕೆ ಮೈಸೂರಿಗೆ ಹೋಗಲೆಂದು ಬಸ್ ಸ್ಟ್ಯಾಂಡ್ ನಲ್ಲಿ ಕುಳಿತಿರುತ್ತಾಳೆ. ಆಗ ಆಕೆ ಅಳುವುದನ್ನು ನೋಡಿ ಸಾರ್ವಜನಿಕರೋರ್ವರು 112 ಗೆ ಕರೆ ಮಾಡಿದ್ದಾರೆ.
ತಕ್ಷಣ ಅಲ್ಲಿಗೆ ಕೊಣಾಜೆ ಪೊಲೀಸರು ಧಾವಿಸಿ ಆಕೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಆಕೆಗೆ ಸಾಂತ್ವನ ಹೇಳಿ, ಮಧ್ಯಾಹ್ನ ಊಟದ ವೇಳೆಯಾಗಿರುವುದರಿಂದ ಊಟ ತರಿಸಿಕೊಟ್ಟು ಬಳಿಕ ವಿಚಾರಣೆ ನಡೆಸಿದ್ದಾರೆ. ಆಕೆ ತನ್ನ ವಕೀಲರು ಹಾಗೂ ಪೋಷಕರೊಂದಿಗೆ ಮಾತನಾಡಿದ್ದಾಳೆ. ಆಕೆಯೇ ತಾನು ಮೈಸೂರಲ್ಲಿಯೇ ಕೇಸು ದಾಖಲಿಸುತ್ತೇನೆ ಎಂದು ಹೇಳಿದ್ದಾಳೆ. ಆದ್ದರಿಂದ ಆಕೆಯನ್ನು ಕೊಣಾಜೆ ಪೊಲೀಸರೇ ತಮ್ಮ ವಾಹನದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು, ಟಿಕೆಟ್ ತೆಗಿಸಿಕೊಟ್ಟು, ಬಸ್ನಲ್ಲಿ ಕೂರಿಸಿ ಮೈಸೂರಿಗೆ ಕಳುಹಿಸಿ ಕೊಟ್ಟಿದ್ದಾರೆ.
ನಿನ್ನೆ ಆಕೆಯ ವಕೀಲರು ಮಂಗಳೂರಿನಲ್ಲಿಯೇ ದೂರು ದಾಖಲಿಸಬೇಕೆಂದು ಆಕೆಯನ್ನು ಮತ್ತೆ ಕರೆ ತಂದಿದ್ದು, ಈ ಸಂದರ್ಭ ತಾನೇ ಆಕೆಯನ್ನು ವಿಚಾರಣೆ ನಡೆಸಿದ್ದೇನೆ. ಬಳಿಕ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.