ಬಂಟ್ವಾಳ(ಮಂಗಳೂರು): ಉತ್ತರ ಭಾರತ ಪ್ರವಾಸಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕೇರಳ, ತಮಿಳುನಾಡಿನ ಒಂದಿಬ್ಬರು ಸೇರಿದಂತೆ ಜಿಲ್ಲೆಯ ಸುಮಾರು 92 ಮಂದಿ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದು, ಅವರು ಜುಲೈ 19ರಂದು ಗುಜರಾತಿನ ವೆರಾವಲ್ನಲ್ಲಿರುವ ಶ್ರೀ ಸೋಮನಾಥ ದೇವಾಲಯದ ದರ್ಶನಕ್ಕೆ ತೆರಳಿದ್ದ ವೇಳೆ ಯಾತ್ರಿಕರು ಕೆಲಹೊತ್ತು ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದರು.
ಗುಜರಾತ್ನಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹೀಗಾಗಿ ವೆರಾವಲ್ ಪ್ರದೇಶದಲ್ಲಿ ಏಕಾಏಕಿ ಪ್ರವಾಹದ ಸ್ಥಿತಿ ನಿರ್ಮಾಣಗೊಂಡು ರಸ್ತೆಗಳಲ್ಲಿ ನೀರು ಸುತ್ತುವರೆದಿತ್ತು. ಸೋಮನಾಥನ ದರ್ಶನ ಮಾಡಿ ಹಿಂದಿರುಗುವ ವೇಳೆ ಇವರೆಲ್ಲರೂ ಪ್ರವಾಹದ ನೀರಿನಲ್ಲಿ ಸಿಲುಕಿದ್ದರು. ಬಳಿಕ ಸ್ಥಳೀಯ ಜಿಲ್ಲಾಡಳಿತ ಇವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ. ಇವರು ದೇವರ ದರ್ಶನ ಮುಗಿಸಿ ವೆರಾವಲ್ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10ರ ರೈಲಿಗೆ ಮತ್ತೊಂದು ಕ್ಷೇತ್ರಕ್ಕೆ ತೆರಳಬೇಕಿತ್ತು. ಆದರೆ, ರೈಲ್ವೇ ಹಳಿಗಳಲ್ಲೂ ನೀರು ತುಂಬಿದ್ದ ಪರಿಣಾಮ ರೈಲು ರಾತ್ರಿ ಹೊರಡಲಿದೆ. ಹೀಗಾಗಿ ಜಿಲ್ಲೆಯವರೆಲ್ಲರೂ ಸುರಕ್ಷಿತವಾಗಿ ರೈಲು ನಿಲ್ದಾಣದಲ್ಲಿ ಉಳಿದುಕೊಂಡಿದ್ದಾರೆ ಎಂದು ಯಾತ್ರೆಗೆ ತೆರಳಿದವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೇಮಾವತಿ ನದಿಯಲ್ಲಿ ವೃದ್ಧೆಯ ಶವ ಪತ್ತೆ: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ