ಮಂಗಳೂರು: ಮಂಗಳೂರಿನಲ್ಲಿ 2019ರ ಡಿಸೆಂಬರ್ 19ರಂದು ನಡೆದ ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆಯ ಅಂತಿಮ ವಿಚಾರಣೆ ಸೆಪ್ಟೆಂಬರ್ 1ರಂದು ನಡೆಯಲಿದೆ.
ಮಂಗಳೂರು ಗೋಲಿಬಾರ್ ಘಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾವುದೇ ವ್ಯಕ್ತಿಗಳು ಸೆಪ್ಪೆಂಬರ್ 1ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಂಗಳೂರು ಮಿನಿ ವಿಧಾನ ಸೌಧದಲ್ಲಿರುವ ಸಹಾಯಕ ಆಯುಕ್ತರ ಕೋರ್ಟ್ ಹಾಲ್ನಲ್ಲಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆ ನೀಡಲು ಅಂತಿಮ ಅವಕಾಶ ನೀಡಲಾಗಿದೆ. ಇದರ ಬಳಿಕ ಸಾರ್ವಜನಿಕರಿಂದ ಯಾವುದೇ ಸಾಕ್ಷ್ಯ ಅಥವಾ ಹೇಳಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ, ಉಡುಪಿ ಡಿಸಿ ಜಿ. ಜಗದೀಶ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2019ರ ಡಿಸೆಂಬರ್ 19ರಂದು ಎನ್ಆರ್ಸಿ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಗುಂಡೇಟಿನಿಂದ ನೌಶಿನ್ ಹಾಗೂ ಜಲೀಲ್ ಕುದ್ರೋಳಿ ಎಂಬವವರು ಮೃತಪಟ್ಟಿದ್ದರು. ಈ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಇವರನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು.