ಮಂಗಳೂರು : ಭಾರತೀಯ ಋಷಿ ಪರಂಪರೆಯ ಯೋಗದಲ್ಲಿ ಹಲವಾರು ಮಂದಿ ಮಹತ್ತರ ಸಾಧನೆ ಮಾಡಿದ್ದಾರೆ. ಆದರೆ, ಇಲ್ಲೊಬ್ಬ ಐದರ ಬಾಲೆ ಯೋಗದಲ್ಲಿ ಮಾಡಿರುವ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ಗರಿಮೆಯ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.
ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ 'ವಿನಂತಿ ಹರಿಕಾಂತ' ಎಂಬ ಐದರ ಹರೆಯದ ಪೋರಿ 'ಉತ್ರಾಸನ ಭಂಗಿ’ಯಲ್ಲಿ ದೀರ್ಘ ಕಾಲದವರೆಗೆ ಅಂದರೆ 5.15 ನಿಮಿಷ ಕಾಲ ತಟಸ್ಥವಾಗಿ ಉಳಿಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾಳೆ. ಈಕೆಯ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.
ಎಳೆ ವಯಸ್ಸಿನಿಂದಲೇ ಯೋಗದತ್ತ ಆಕರ್ಷಿತಳಾದ 'ವಿನಂತಿ ಹರಿಕಾಂತ', 100ಕ್ಕಿಂತ ಹೆಚ್ಚಿನ ಯೋಗಾಸನ ಭಂಗಿಗಳನ್ನು ಸರಾಗವಾಗಿ ಮಾಡುತ್ತಾಳೆ. 'ವಿನಂತಿ ಹರಿಕಾಂತ' ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ನಿವಾಸಿ.
ಪ್ರಸ್ತುತ 20 ವರ್ಷಗಳಿಂದ ಮಂಗಳೂರಿನ ಕೊಣಾಜೆ ಸಮೀಪದ ಅಸೈಗೋಳಿಯಲ್ಲಿರುವ ಕೆಎಸ್ಆರ್‌ಪಿ 7ನೇ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ್ವರ ಹರಿಕಾಂತ ಹಾಗೂ ಆರತಿ ಹರಿಕಾಂತ ದಂಪತಿಯ ಪುತ್ರಿಯಾಗಿದ್ದಾಳೆ.
ಈಕೆ ಯೋಗಾಸನದಲ್ಲಿ ಮಾತ್ರ ಅಲ್ಲದೆ ನೃತ್ಯ, ಸಂಗೀತ, ಚಿತ್ರ ಕಲೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ತೋರಿಸಿದ್ದಾಳೆ. ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದು ಸಾಧನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.