ಮಂಗಳೂರು : ಡ್ರಗ್ಸ್ ಸೇವನೆ ಹಾಗೂ ಸಾಗಾಟ ಆರೋಪದಲ್ಲಿ ಮಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಬಂಧಿತರಾಗಿದ್ದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಧಿತ ಆರೋಪಿಗಳಾದ ಅಕೀಲ್ ನೌಶೀಲ್ (28) ಮತ್ತು ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ (30) ಎಂಬ ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಗರದಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಈ ಇಬ್ಬರು ಆರೋಪಿಗಳನ್ನು ನಗರ ಅಪರಾಧ ಪತ್ತೆ ದಳ ಮತ್ತು ನಾರ್ಕೊಟಿಕ್ಸ್ ಪೊಲೀಸರು ಬಂಧಿಸಿದ್ದರು.
ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಕೋವಿಡ್ ತಪಾಸಣೆಗೊಳಪಡಿಸಿದ ಬಳಿಕ ಏಳು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಕೋವಿಡ್ ತಪಾಸಣೆಯ ವರದಿ ಸೋಮವಾರ ಬರುವ ನಿರೀಕ್ಷೆಯಿದೆ. ಡ್ಯಾನ್ಸರ್ ಆಗಿರುವ ಕಿಶೋರ್ ಅಮನ್ ಶೆಟ್ಟಿ ನೃತ್ಯ ಪ್ರದರ್ಶನದ ವೇಳೆ ಎನರ್ಜಿ ಬರಲು ಮಾದಕ ಸೇವನೆ ಚಟ ಅಂಟಿಸಿಕೊಂಡಿದ್ದ ಎಂದು ತನಿಖೆಯ ವೇಳೆ ಬಯಲಾಗಿದೆ. ಇದೀಗ ಆರು ತಿಂಗಳಿನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವುದರಿಂದ ಮಾದಕ ವಸ್ತುಗಳ ಮಾರಾಟ ದಂಧೆಗಿಳಿದಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಕಿಶೋರ್ ಮಾದಕ ದ್ರವ್ಯ ವ್ಯಸನಿಯಾಗಿದ್ದರೂ ಡ್ರಗ್ಸ್ ದಂಧೆ ಶುರು ಮಾಡಿದ್ದು, ತೀರಾ ಇತ್ತೀಚೆಗೆ ಎನ್ನುವ ಅಂಶ ತಿಳಿದು ಬಂದಿದೆ. ಮುಂಬೈನಲ್ಲಿ ಕೆಲ ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸುತ್ತ, ಡ್ಯಾನ್ಸರ್ ಆಗಿದ್ದ ಆತ ಕೆಲ ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಕುಳಾಯಿಗುಡ್ಡೆಯಲ್ಲಿ ಚಿಕ್ಕ ಹಂಚಿನ ಮನೆಯಲ್ಲಿ ಅವನ ಕುಟುಂಬ ವಾಸವಾಗಿದೆ.
ಕೊರೊನಾ ಲಾಕ್‌ಡೌನ್ ಬಳಿಕ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ. ಹಾಗಾಗಿ, ಡ್ರಗ್ಸ್ ದಂಧೆ ಶುರು ಮಾಡಿಕೊಂಡಿದ್ದ. ಮುಂಬೈ ಸ್ನೇಹಿತರ ನಂಟಿರೋದರಿಂದ ಅನ್‌ಲಾಕ್ ಬಳಿಕ ಅಲ್ಲಿಂದ ಡ್ರಗ್ಸ್ ತರಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಕಿಶೋರ್ ಅಮನ್ ಶೆಟ್ಟಿ ಕೊಕೇನ್ ಮಾತ್ರ ಸೇವನೆ ಮಾಡುತ್ತಿದ್ದ. ಆದರೆ, ಅಪಾಯಕಾರಿ ಎಂಡಿಎಂಎ ಸೇವನೆ ಮಾಡುತ್ತಿರಲಿಲ್ಲ ಎಂದೂ ತಿಳಿಸಿದ್ದಾನೆ. ಆದರೆ, ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಲು ಡ್ರಗ್ಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳಾದ ಅಕೀಲ್ ನೌಶೀಲ್ ಮತ್ತು ಕಿಶೋರ್ ಅಮನ್ ಶೆಟ್ಟಿ ಯುವತಿಯರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಸಾಗಾಟ ಮಾಡುತ್ತಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ, ಆರೋಪಿಗಳಿಗೆ ಪ್ರತಿಷ್ಠಿತ ವ್ಯಕ್ತಿಗಳ ಜತೆಗೆ ಒಡನಾಡವಿರುವುದು ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಇವರು ಸಾಮಾನ್ಯ ಮಾದಕ ಸೇವನೆ, ಮಾರಾಟ ಆರೋಪಿಗಳೆಂದು ತಿಳಿದು ಬಂದಿದೆ. ಈ ವಿಚಾರದಲ್ಲಿ ಮತ್ತಷ್ಟು ವಿಚಾರಣೆ ನಡೆಸಿದಾಗ ಸತ್ಯಾಂಶ ತಿಳಿದು ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.