ಮಂಗಳೂರು: ಶಾರ್ಜಾದಿಂದ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನೊಬ್ಬ ತಾನು ಧರಿಸಿದ ಬಟ್ಟೆಯಲ್ಲಿ ಪೌಡರ್ ರೂಪದಲ್ಲಿ 310 ಗ್ರಾಂ ತೂಕದ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ಮೂಲದ ಪ್ರಯಾಣಿಕನಾದ ಈತ ಶಾರ್ಜಾದಿಂದ ಸೋಮವಾರ (ಸೆಪ್ಟೆಂಬರ್ 27)ದಂದು ಮಂಗಳೂರಿಗೆ ಆಗಮಿಸಿದ್ದ. ಈತ ಧರಿಸಿದ್ದ ಶರ್ಟ್ ತಪಾಸಣೆ ನಡೆಸಿದಾಗ ಚಿನ್ನವನ್ನು ಪೌಡರ್ ರೂಪದಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ಕಂಡುಬಂದಿದೆ. ಈತನಿಂದ 24 ಕ್ಯಾರೆಟ್ ಪರಿಶುದ್ದತೆಯ 310 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಇದರ ಮೌಲ್ಯ ರೂ 14.69 ಲಕ್ಷ ಎಂದು ಅಂದಾಜಿಸಲಾಗಿದ್ದು, ಚಿನ್ನವನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಿಚಾರಣೆ ನಡೆಸುತ್ತಿದ್ದಾರೆ.