ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ: ಕದ್ರಿ ದೇವಸ್ಥಾನ ಟಾರ್ಗೆಟ್ ಆಗಿತ್ತು! - ಈಟಿವಿ ಭಾರತ ಕನ್ನಡ
ಮಂಗಳೂರಿನಲ್ಲಿ ಸ್ಪೋಟಗೊಂಡ ಕುಕ್ಕರ್ ಬಾಂಬ್ ಅನ್ನು ಸುಪ್ರಸಿದ್ದ ಕದ್ರಿ ದೇವಸ್ಥಾನದಲ್ಲಿ ಸ್ಪೋಟಿಸಲು ಯೋಜನೆ ರೂಪಿಸಲಾಗಿತ್ತು ಎಂಬ ಅಂಶ ಬಯಲಾಗಿದೆ.


Published : Sep 16, 2023, 9:56 AM IST
ಮಂಗಳೂರು: ಕಳೆದ ವರ್ಷ ಮಂಗಳೂರಿನಲ್ಲಿ ರಿಕ್ಷಾದಲ್ಲಿ ಸ್ಫೋಟಗೊಂಡಿದ್ದ ಕುಕ್ಕರ್ ಬಾಂಬ್ನ್ನು ಕದ್ರಿ ದೇವಸ್ಥಾನದಲ್ಲಿ ಸ್ಪೋಟಿಸಲು ಉದ್ದೇಶಿಸಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. 2022ರ ನವೆಂಬರ್ 19 ರಂದು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ನಡೆದಿತ್ತು. ಉಗ್ರ ಶಾರೀಕ್ ನಗರದ ಪಡೀಲ್ ನಲ್ಲಿ ರಿಕ್ಷಾವೊಂದನ್ನು ಹತ್ತಿ ಪ್ರಯಾಣ ಬೆಳೆಸುತ್ತಿದ್ದಾಗ ನಾಗುರಿ ಬಳಿ ಆತನ ಬಳಿಯಿದ್ದ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಸಂಚರಿಸುತ್ತಿದ್ದ ರಿಕ್ಷಾ ದಲ್ಲಿ ಕುಕ್ಕರ್ ಬಾಂಬ್ ಸ್ಪೋಟವಾದ ಕಾರಣ ಆರೋಪಿ ಶಾರೀಕ್ ಮತ್ತು ರಿಕ್ಷಾ ಚಾಲಕ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಿಕ್ಷಾ ಚಾಲಕ ಗುಣಮುಖನಾಗಿ ಮನೆಗೆ ಮರಳಿದರೆ, ಆರೋಪಿ ಶಾರೀಕ್ನನ್ನು ಎನ್ ಐ ಎ ತಂಡ ಬೆಂಗಳೂರು ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು.
ಈ ಪ್ರಕರಣವನ್ನು ಎನ್ ಐ ಎಗೆ ವಹಿಸಲಾಗಿತ್ತು. ಆ ಸಂದರ್ಭದಲ್ಲಿ ಆರೋಪಿ ಶಾರೀಕ್ ಕುಕ್ಕರ್ ಬಾಂಬ್ ಸ್ಪೋಟಗೊಳಿಸಲು ಎಲ್ಲಿಗೆ ಕೊಂಡೊಯ್ಯುತ್ತಿದ್ದ ಎಂಬ ಮಾಹಿತಿ ಇರಲಿಲ್ಲ. ಆದರೆ, ಆ ಸಂದರ್ಭದಲ್ಲಿ ಕುಕ್ಕರ್ ಬಾಂಬ್ನ್ನು ಕದ್ರಿ ದೇವಸ್ಥಾನದಲ್ಲಿ ಸ್ಪೋಟಗೊಳಿಸಲು ಉದ್ದೇಶಿಸಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಆ ಸುದ್ದಿಗೆ ಅಧಿಕೃತತೆ ಇರಲಿಲ್ಲ.
ಎರಡು ದಿನಗಳ ಹಿಂದೆ ನವ ದೆಹಲಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಶಿವಮೊಗ್ಗ ಜಿಲ್ಲೆಯ ಅರಾಫತ್ ನನ್ನು ಬಂಧಿಸಿದ ಬಳಿಕ ಶಾರೀಕ್ ಕುಕ್ಕರ್ ಬಾಂಬ್ ಸ್ಫೋಟದ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು ಎಂಬುದು ಬಯಲಾಗಿದೆ. ಉಗ್ರ ಅರಾಫತ್ ಅಲಿ ತುಂಗಾ ತೀರದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ ಮತ್ತು ಮಂಗಳೂರು ಗೋಡೆ ಬರಹದ ಮಾಸ್ಟರ್ ಮೈಂಡ್ ಆಗಿದ್ದ. ಈತನ ಬಂಧನದ ಪತ್ರಿಕಾ ಪ್ರಕಟಣೆಯಲ್ಲಿ ಎನ್ ಐ ಎ ಶಾರೀಕ್ ನ ಕುಕ್ಕರ್ ಬಾಂಬ್ ಸ್ಪೋಟದ ಟಾರ್ಗೆಟ್ ಕದ್ರಿ ಮಂಜುನಾಥ ದೇವಸ್ಥಾನ ಆಗಿತ್ತು ಎಂಬುದನ್ನು ಮೊದಲ ಬಾರಿಗೆ ಬಹಿರಂಗವಾಗಿ ತಿಳಿಸಿದೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ಬಳಿ ಮತ್ತು ನ್ಯಾಯಾಲಯದ ಬಳಿ ಉಗ್ರ ಪರ ಗೋಡೆ ಬರಹ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನದ ಮೂಲಕ ಈ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕುಕ್ಕರ್ ಸ್ಫೋಟ ಕೇಸ್.. ರಿಕ್ಷಾ ಚಾಲಕನಿಗೆ ಗುರು ಬೆಳದಿಂಗಳು ಸಂಸ್ಥೆಯಿಂದ ಮನೆ ಹಸ್ತಾಂತರ.. ಇನ್ನೂ ಸಿಗದ ಸರ್ಕಾರದ ಪರಿಹಾರ