ಮಂಗಳೂರು: ರಾಜ್ಯದಲ್ಲಿ ಇಂದು ಮೊದಲ ಹಂತದ 'ಪ್ರಜಾಪ್ರಭುತ್ವದ ಹಬ್ಬ' ನಡೆಯಲಿದೆ. ಈ ನಿಟ್ಟಿನಲ್ಲಿ ಕರಾವಳಿ ಭಾಗದ ಪ್ರಮುಖ ಲೋಕಸಭಾ ಕ್ಷೇತ್ರ ದಕ್ಷಿಣ ಕನ್ನಡದ ಸಂಪೂರ್ಣ ಚಿತ್ರಣ ನೀಡಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ವಿವಿಧ ಪಕ್ಷಗಳಿಂದ ಒಟ್ಟು 13 ಮಂದಿ ಅಭ್ಯರ್ಥಿಗಳು ಲೋಕಸಮರದ ಅಖಾಡದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮಿಥುನ್ ರೈ ಅದೃಷ್ಟ ಪರೀಕ್ಷೆಗೆ ಅಣಿಯಾಗಿ ನಿಂತಿದ್ದರೆ, ಬಿಜೆಪಿಯಿಂದ ಹಾಲಿ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಕಣದಲ್ಲಿದ್ದಾರೆ. ಇನ್ನುಳಿದಂತೆ ಬಿಎಸ್‌ಪಿಯಿಂದ ಎಸ್. ಸತೀಶ್ ಸಾಲ್ಯಾನ್, ಎಸ್‌ಡಿಪಿಐನಿಂದ ಮೊಹಮ್ಮದ್ ಇಲಿಯಾಸ್, ಉಪೇಂದ್ರರ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ್ ಶ್ರೀನಿವಾಸ್, ಹಿಂದೂಸ್ತಾನ್ ಜನತಾ ಪಾರ್ಟಿಯಿಂದ ಸುದೀಪ್ ಕುಮಾರ್ ಪೂಜಾರಿ ಮತ್ತು ಪಕ್ಷೇತರರಾಗಿ ಅಬ್ದುಲ್ ಹಮೀದ್, ಅಲೆಗ್ಸಾಂಡರ್, ದೀಪಕ್, ರಾಜೇಶ್ ಕುವೆಲ್ಲೊ, ಮೊಹಮ್ಮದ್ ಖಾಲಿದ್, ಮ್ಯಾಕ್ಸಿನ್ ಪಿಂಟು, ವೆಂಕಟೇಶ್ ಬೆಂಡೆ ಹಾಗು ಸುರೇಶ್ ಪೂಜಾರಿ ಅಖಾಡದಲ್ಲಿದ್ದಾರೆ.
ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ v/s ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ಕೈ ಪಕ್ಷದ ಮಿಥುನ್ ರೈ ಮತ್ತು ಕಮಲ ಪಾರ್ಟಿಯ ನಳಿನ್ ಕುಮಾರ್ ಕಟೀಲ್ ಮಧ್ಯೆ ಲೋಕಸಮರದ ದಂಗಲ್ ಜೋರಾಗಿದೆ. ಎಲ್ಲ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಇಂದು ಕರಾವಳಿ ಜಿಲ್ಲೆಯ ಮತದಾರರು ಬರೆಯಲು ಸಜ್ಜಾಗಿದ್ದಾರೆ.
![Magalore](https://etvbharatimages.akamaized.net/etvbharat/images/3031770_djvsd.jpg)
ಕ್ಷೇತ್ರದ ರಾಜಕೀಯ ಚಿತ್ರಣ:
1991ರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ವಿಜಯ ಪತಾಕೆ ಹಾರಿಸುತ್ತಲೇ ಬಂದಿದೆ. ಈ ಹಿಂದೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಅವರ 'ಕೈ' ಹಿಡಿದಿದ್ದ ಈ ಕ್ಷೇತ್ರ ಬಳಿಕ ಅವರಿಗೆ ಸತತ ಸೋಲುಗಳ ಪೆಟ್ಟು ಕೊಟ್ಟಿದೆ. ಒಂದು ಬಾರಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಕೈ ಸುಟ್ಟುಕೊಂಡಿದ್ದರು. ಬಿಜೆಪಿಯಿಂದ ದಿ. ಧನಂಜಯ್ ಕುಮಾರ್, ಮಾಜಿ ಸಿಎಂ ಸದಾನಂದ ಗೌಡ ಈ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇವರ ಬಳಿಕ 2009 ಹಾಗು 2014 ರಲ್ಲಿ ನಳಿನ್ ಕುಮಾರ್ ಕಟೀಲ್ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಇದೀಗ ಮತ್ತೆ ಇದೇ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ.
![Magalore](https://etvbharatimages.akamaized.net/etvbharat/images/3031770_dfdsd.jpg)
ಹೊಸ ಮುಖ ಪರಿಚಯಿಸಿ 'ಕೈ' ಅದೃಷ್ಠ ಪರೀಕ್ಷೆ
ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಹೊಸ ಯುವ ಮುಖ ಪರಿಚಯಿಸಿ ಗೆಲ್ಲುವ ಕನಸು ಕಾಣುತ್ತಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಅನೇಕ ಕಾಂಗ್ರೆಸ್ ನಾಯಕರು ಉತ್ಸುಕರಾಗಿದ್ದರೂ ಅಂತಿಮವಾಗಿ ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮಿಥುನ್ ಎಂ ರೈ ಅವರಿಗೆ ಮಣೆ ಹಾಕಲಾಗಿದೆ. ಹಾಗಾಗಿ, ದಕ್ಷಿಣ ಕನ್ನಡ ಕ್ಷೇತ್ರ ಆ ಪಕ್ಷಕ್ಕೆ ಸವಾಲಿನ ಕಣವಾಗಿ ಮಾರ್ಪಟ್ಟಿದೆ. ಕ್ಷೇತದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವೈಫಲ್ಯವನ್ನು ಪ್ರಚಾರದಲ್ಲಿ ಬಳಸಿಕೊಂಡಿರುವ ಮಿಥುನ್ ರೈ, ಜಿಲ್ಲೆಯ ಅಭಿವೃದ್ಧಿಗೆ ಮತ ನೀಡುವಂತೆ ಮತದಾರರ ಮನವೊಲಿಸಿದ್ದರು.
'ಮೋದಿ ಅಲೆ'ಯೇ ಬಿಜೆಪಿಯ ಶಕ್ತಿ
ಬಿಜೆಪಿ ಕಳೆದ ಬಾರಿಯಂತೆ ಈ ಬಾರಿಯೂ 'ಮೋದಿ ಅಲೆ'ಯನ್ನು ನೆಚ್ಚಿಕೊಂಡಿದೆ. ಕಳೆದೆರಡು ಚುನಾವಣೆಯಲ್ಲೂ ಇಲ್ಲಿನ ಮತದಾರರು ಬಿಜೆಪಿ ಕೈಹಿಡಿದ ಪರಿಣಾಮ ಆ ಪಕ್ಷದ ನಾಯಕರು ಸಹ ಆತ್ಮವಿಶ್ವಾಸದಿಂದ ಪ್ರಚಾರ ನಡೆಸಿದ್ದರು. ಕೇಂದ್ರ ಸರ್ಕಾರದ ಸಾಧನೆ ಹಾಗೂ ನರೇಂದ್ರ ಮೋದಿ ಚರಿಷ್ಮಾ ಬಳಸಿಕೊಂಡು ಬಿಜೆಪಿ ಮತಬೇಟೆ ನಡೆಸಿತ್ತು.
![Magalore](https://etvbharatimages.akamaized.net/etvbharat/images/3031770_dfdsgfghd.jpg)
ಕ್ಷೇತ್ರದಲ್ಲಿ ಜಾತಿ ಸಮೀಕರಣ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,24,460 ಮತದಾರರಿದ್ದಾರೆ. ಇದರಲ್ಲಿ 8,45,308 ಪುರುಷ ಮತದಾರರು, 8,79,050 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದಲ್ಲಿರುವ ಇತರ ಮತದಾರರ ಸಂಖ್ಯೆ 102. ಈ ಮತದಾರರ ಪೈಕಿ, ಬಿಲ್ಲವರು ನಿರ್ಣಾಯಕ ಮತದಾರರಾಗಿದ್ದಾರೆ.
ವಿಶೇಷ ಅಂದರೆ, ಬಿಲ್ಲವ ಸಮುದಾಯದ ನಾಯಕರೇ ಆಗಿರುವ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಅವರನ್ನು ಕ್ಷೇತ್ರದ ಜನ ಕೈ ಹಿಡಿದಿರಲಿಲ್ಲ. ಹಿಂದೂಗಳ ಮತದಾರರಲ್ಲಿ ಬಿಲ್ಲವರ ಬಳಿಕ ಸಂಖ್ಯಾಬಲದ ದೃಷ್ಟಿಯಿಂದ ಬಂಟ ಸಮುದಾಯ ಪ್ರಬಲವಾಗಿದ್ದು, ನಳಿನ್ ಕುಮಾರ್ ಕಟೀಲ್ ಇದೇ ಸಮುದಾಯವರಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಕೂಡ ಬಂಟ ಸಮುದಾಯದ ಯುವನಾಯಕ ಮಿಥುನ್ ಎಂ ರೈ ಗೆ ಟಿಕೆಟ್ ನೀಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಬಗ್ಗೆ ಬಂಟ-ಬಿಲ್ಲವ ಎಂಬ ಜಾತಿ ವಿಚಾರಗಳಿದ್ದವು. ಈ ಬಾರಿ ಕೈ, ಕಮಲದಿಂದ ಕಣಕ್ಕಿಳಿದಿರುವ ಇಬ್ಬರೂ ಅಭ್ಯರ್ಥಿಗಳೂ ಬಂಟ ಸಮುದಾಯದವರೇ ಆಗಿರುವುದರಿಂದ ಈ ವಿಚಾರಗಳು ಮುನ್ನೆಲೆಗೆ ಬಂದಿಲ್ಲ. ಆದರೂ ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟಿರುವ ಉಭಯ ಪಕ್ಷಗಳು ಮತ ಗಳಿಕೆಗಾಗಿ ತಂತ್ರಗಾರಿಕೆಯಲ್ಲಿ ತೊಡಗಿವೆ. ಇನ್ನು, ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳಾಗಿದ್ದ ಅಲ್ಪಸಂಖ್ಯಾತ ಮತಗಳ (ಮುಸ್ಲಿಂ, ಕ್ರಿಶ್ಚಿಯನ್) ಮೇಲೆ ಈ ಬಾರಿ ಎಸ್‌ಡಿಪಿಐ ಕಣ್ಣಿಟ್ಟಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಸ್‌ಡಿಪಿಐ 25 ಸಾವಿರ ಮತಗಳನ್ನು ಪಡೆದಿತ್ತು. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳನ್ನು ನಂಬಿ ಕುಳಿತಿರುವ ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರಕ್ಕೆ ಇದು ಅಡ್ಡಿಯಾಗುವ ಸಾಧ್ಯತೆಯಿದೆ.
![Magalore](https://etvbharatimages.akamaized.net/etvbharat/images/3031770_dfdsgfgffghd.jpg)
ಚುನಾವಣೆಗೆ ಭದ್ರತೆ ಹೇಗಿದೆ?
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಈ ಬಾರಿ 1,861 ಮತಗಟ್ಟೆಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ 8,920 ಚುನಾವಣಾ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಇಲಾಖೆಯ 1,500 ಸಿಬ್ಬಂದಿ, ಕೇಂದ್ರೀಯ ಪಡೆಯ 2 ಕಂಪನಿ ಮತ್ತು 8 ಕೆಎಸ್‌ಆರ್‌ಪಿ, 12 ಸಿಎಆರ್ ತುಕಡಿಗಳು ಭದ್ರತಾ ಕಾರ್ಯದಲ್ಲಿ ನಿರತವಾಗಿವೆ. ಇದನ್ನು ಹೊರತುಪಡಿಸಿ ಜಿಲ್ಲಾ ಪೊಲೀಸ್ ಇಲಾಖೆಯ 1,463 ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 255 ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕಡಿ, 16 ಡಿಎಆರ್ ಸಿಬ್ಬಂದಿ ಭದ್ರತೆಯ ಹೊಣೆ ಹೊತ್ತಿದ್ದಾರೆ.