ಮಂಗಳೂರು: ನಗರ ಪೊಲೀಸ್ ಆಯುಕ್ತರಾದ ಡಾ. ಪಿ.ಎಸ್. ಹರ್ಷ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಡಾ.ಹರ್ಷ ಅವರನ್ನು ಮಾಹಿತಿ ಮತ್ತು ಸಂಪರ್ಕ ಇಲಾಖೆಯ ಡೆಪ್ಯುಟಿ ಜನರಲ್ ಆ್ಯಂಡ್ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ತೆರವಾದ ಅವರ ಸ್ಥಾನಕ್ಕೆ ನಕ್ಸಲ್ ನಿಗ್ರಹ ಪಡೆಯ ಆಯುಕ್ತ ವಿಕಾಸ್ ಕುಮಾರ್ ಅವರನ್ನು ನೇಮಕಗೊಳಿಸಲಾಗಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ಡಾ.ಪಿ.ಎಸ್. ಹರ್ಷ ಅವರು ಪೊಲೀಸ್ ಆಯುಕ್ತರಾಗಿರುವಾಗ ಗೋಲಿಬಾರ್ ಹಾಗೂ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಪತ್ತೆ ಎರಡು ಪ್ರಮುಖ ಪ್ರಕರಣಗಳು ನಡೆದಿತ್ತು. 2019ರ ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಗಲಭೆಗೆ ಸಂಬಂಧಿಸಿದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದು, ದೇಶಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಾರಗಳಷ್ಟು ಕಾಲ ನಿಷೇಧಾಜ್ಞೆಯನ್ನೂ ಹೇರಲಾಗಿತ್ತು. ಆ ಬಳಿಕ ಡಾ.ಪಿ.ಎಸ್. ಹರ್ಷ ಅವರ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿತ್ತು. ಈಗ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಯ ಹಂತದಲ್ಲಿದೆ.
2020ರ ಜನವರಿ 20ರಂದು ಆದಿತ್ಯ ರಾವ್ ಎಂಬ ಆರೋಪಿ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದು, ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಆರೋಪಿ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದ. ಇದೀಗ ಪ್ರಕರಣದ ತನಿಖೆ ಸಂಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.