ಮಂಗಳೂರು: ಗುರುವಾರ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಕಮಿಷನರ್ ಡಾ. ಪಿ.ಎಸ್. ಹರ್ಷಾ ಪೂರ್ಣ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಒಟ್ಟು 33 ಪೊಲೀಸರು ಹಾಗೂ ಐವರು ನಾಗರಿಕರಿಗೆ ಗಾಯಗೊಂಡಿದ್ದಾರೆ. ಈ ಸಂಬಂಧ ಏಳು ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ನಗರದಲ್ಲಿ 22ರ ಮಧ್ಯರಾತ್ರಿವರೆಗೂ ಕರ್ಫ್ಯೂ ಇರಲಿದೆ ಎಂದ ಅವರು, ಇವತ್ತು ಬೆಳಗಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಂದಾಲೋಚನೆಯಿಂದ ಸಮರ್ಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಇವತ್ತು ಶುಕ್ರವಾರವಾದ್ದರಿಂದ ಮುಸ್ಲಿಂ ಸಮುದಾಯದವರು ನಮಾಜ್ ಮಾಡಲು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ಕರ್ಫ್ಯೂ ಸಡಿಲಗೊಳಿಸಲಾಗಿತ್ತು ಎಂದು ಹೇಳಿದರು.
ಕೇರಳ ಪತ್ರಕರ್ತರನ್ನು ವಶಕ್ಕೆ ಪಡೆದಿರುವ ಕುರಿತು ಮಾತನಾಡಿದ ಅವರು, ಅವರಲ್ಲಿ ಯಾವುದೇ ಅಧಿಕೃತ ದಾಖಲಾತಿಗಳು ಹಾಗೂ ಐಡೆಂಟಿಟಿ ಕಾರ್ಡ್ ಇಲ್ಲದ ಹಿನ್ನೆಲೆ 8 ಪತ್ರಕರ್ತರನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಅವರನ್ನು ಕೇರಳದ ಗಡಿವರೆಗೆ ಬಿಟ್ಟು ಬರಲಾಯ್ತು ಎಂದು ಮಾಹಿತಿ ನೀಡಿದ್ರು.
ಇನ್ನು ನಾಳೆ ಸಿಎಂ ಯಡಿಯೂರಪ್ಪ ಮತ್ತು ಗೃಹ ಸಚಿವ ಬೊಮ್ಮಾಯಿ ಅವರು ನಗರಕ್ಕೆ ಆಗಮಿಸಲಿದ್ದು, ಅವರೊಂದಿಗೆ ಸಭೆ ಇದೆ. ಈ ವೇಳೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ರು.