ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಪತ್ತೆ ಪ್ರಕರಣ ಕೇವಲ ಅದೊಂದು ಪೊಲೀಸರು ನಡೆಸಿದ ಪ್ರಹಸನವಷ್ಟೇ.. ಅಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹತ್ತು ಕೆಜಿ ತೂಕದ ಬಾಂಬ್ ಪತ್ತೆ ಎಂದು ಆತಂಕ ಮೂಡಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ತೊಕ್ಕೊಟ್ಟಿನಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆಯ ಘಟನೆ ಎರಡು ಸಮುದಾಯದ ನಡುವೆ ಘರ್ಷಣೆ ಮಾಡಲು ಮಾಡಿದ ಹುನ್ನಾರ. ಆತಂಕ ಉಂಟು ಮಾಡುವ ವಾತಾವರಣ ನಿರ್ಮಾಣ ಮಾಡಬೇಡಿ. ಸತ್ಯಾಸತ್ಯತೆಯನ್ನು ಸರ್ಕಾರ ಜನತೆಯ ಮುಂದೆ ಇಡಬೇಕು ಎಂದರು.
ಕಬ್ಬಿಣದ ಪೆಟ್ಟಿಗೆ ತರ ಇರುವ ಬಾಕ್ಸ್‌ನಲ್ಲಿ ಪಟಾಕಿ ತಯಾರಕ ಪೌಡರ್ ತುಂಬಲಾಗಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಆದರೆ, ಆ ಬಾಕ್ಸ್‌ನಲ್ಲಿ ಮುಖಕ್ಕೆ ಹಾಕುವ ಪೌಡರ್ ಇತ್ತೋ ಅನ್ನೋದು ನನಗೆ ಗೊತ್ತಿಲ್ಲ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ದಿನದಂದು ಪೊಲೀಸ್ ಇಲಾಖೆ ಅಣಕು ಪ್ರದರ್ಶನ ಮಾಡಲಾಗುತ್ತದೆ. ಇದು ಅದೇ ತರಹದ ಪೊಲೀಸರ ಅಣಕು ಪ್ರದರ್ಶನ ಎಂದು ವ್ಯಂಗ್ಯವಾಡಿದರು.
ನಿನ್ನೆಯ ಘಟನೆ ಅತ್ಯಂತ ಹುಡುಗಾಟಿಕೆಯದು. ಜನರ ನಡುವೆ ಸಂಘರ್ಷ ಉಂಟು ಮಾಡಲು ಮಾಡಿರುವ ಪ್ರಹಸನ. ಸರ್ಕಾರ ಸತ್ಯಾಸತ್ಯತೆ ಜನರಿಗೆ ತಿಳಿಸಬೇಕು. ವಿಮಾನ ನಿಲ್ದಾಣದಲ್ಲಿ ಸಿಸಿ ಟಿವಿ ಎಷ್ಟು ದಿನಗಳಿಂದ ವರ್ಕ್ ಆಗುತ್ತಿರಲಿಲ್ಲ. ನಿನ್ನೆಯ ದಿನ ಮಾತ್ರ ವರ್ಕ್ ಆಗಲಿಲ್ವ?. ಶಾಂತಿಗೆ ಭಂಗ ತರಬೇಡಿ. ಸಮಾಜ ಹಾಳು ಮಾಡಬೇಡಿ. ಬಾಂಬ್ ಇಟ್ಟಿರುವ ವ್ಯಕ್ತಿ ಬಸ್‌ನಲ್ಲಿ ಬಂದದ್ದು, ಸಲೂನ್‌ಗೆ ಹೋದದ್ದು, ರಿಕ್ಷಾದಲ್ಲಿ ಹೋದದ್ದು ಗೊತ್ತಿದ್ದರೆ ಆರೋಪಿಯ ಬಗ್ಗೆಯೂ ತಿಳಿದಿರಬೇಕಲ್ವಾ ಎಂದರು.
ಮಂಗಳೂರಿನಲ್ಲಿ ಕಮಿಷನರ್ ಡಾ.ಪಿ ಎಸ್ ಹರ್ಷ ಅವರು ಭೇಟಿ ನೀಡಿ ಮಾತನಾಡಿದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಮಿಷನರ್ ಭೇಟಿ ಮಾಡಿದ್ದು ನಿಜ. ನಿನ್ನೆಯ ಘಟನೆಯಲ್ಲಿ ನನ್ನದೇನು ಪಾತ್ರವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಕೆಲ ವಿಷಯಗಳನ್ನು ಹೇಳುವಂತಿಲ್ಲ ಎಂದರು.