ಮಂಗಳೂರು: ನಕಲಿ ಪಾಸ್‌ಪೋರ್ಟ್ ಬಳಸಿರುವ ಆರೋಪ ಸಾಬೀತಾದ ಹಿನ್ನೆಲೆ ಕಾಸರಗೋಡು ಜಿಲ್ಲೆ ಕಾಞಂಗಾಡ್ ನಿವಾಸಿ ಅಬ್ದುಲ್ ಬಶೀರ್ ಎಂಬಾತನಿಗೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 1 ವರ್ಷ ಶಿಕ್ಷೆ ಮತ್ತು 1 ಸಾವಿರ ದಂಡ ವಿಧಿಸಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮುರಳೀಧರ ಪೈ.ಬಿ ಈ ಆದೇಶ ಹೊರಡಿಸಿದ್ದಾರೆ.
ಏನಿದು ಘಟನೆ..?
ಅಬ್ದುಲ್ ಬಶೀರ್ 2010ರ ಆಗಸ್ಟ್ 17ರಂದು ಬೇರೊಬ್ಬರ ಪಾಸ್‌ಪೋರ್ಟ್‌ಗೆ ತನ್ನ ಭಾವಚಿತ್ರವನ್ನು ಅಂಟಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಿದ್ದ. ದುಬೈನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಅಲ್ಲಿಂದ ಮಂಗಳೂರಿಗೆ ವಾಪಸ್ ಕಳುಹಿಸಲಾಗಿತ್ತು. ಇಲ್ಲಿ ಪಾಸ್‌ಪೋರ್ಟ್ ಕಾಯ್ದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಾಗಿತ್ತು.
ಈತನ ಕೃತ್ಯಕ್ಕೆ ಸಹಕರಿಸಿರುವ ಉಕ್ಕಾಸ್, ಮುಹಮ್ಮದ್ ಕುಂಞಿ ಮತ್ತು ಮುನೀರ್ ಕೆ. ಎಂಬುವರ ವಿರುದ್ಧ ಕೂಡ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಅಬ್ದುಲ್ ಬಶೀರ್ ವಿಚಾರಣೆಗೆ ಹಾಜರಾಗಿದ್ದ. ಉಳಿದವರು ತಲೆಮರೆಸಿಕೊಂಡಿದ್ದರು. ಹಾಗಾಗಿ ಪ್ರಕರಣವನ್ನು ವಿಭಜಿಸಿ ಅಬ್ದುಲ್ ಬಶೀರ್‌ನನ್ನು ವಿಚಾರಣೆಗೊಳಪಡಿಸಲಾಗಿತ್ತು. ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಹಿರಿಯ ನ್ಯಾಯಿಕ ದಂಡಾಧಿಕಾರಿ 2019ರ ಫೆಬ್ರವರಿ 19ರಂದು ಅಬ್ದುಲ್ ಬಶೀರ್ ಬಿಡುಗಡೆಗೆ ಆದೇಶಿಸಲಾಗಿತ್ತು. ಆದರೆ, ಈ ಆದೇಶ ಪ್ರಶ್ನಿಸಿ ಸರ್ಕಾರದ ಪರವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಮೇಲ್ಮನವಿಯನ್ನು ಪುರಸ್ಕರಿಸಿದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಬಶೀರ್ಗೆ 1 ವರ್ಷ ಕಾರಾಗೃಹ ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.