ಸುಳ್ಯ (ದಕ್ಷಿಣ ಕನ್ನಡ): ಇಂದು ಬೆಳ್ಳಂಬೆಳಗ್ಗೆ ಶೂಟೌಟ್ ನಡೆದಿದ್ದು, ಸುಳ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.
ಸುಳ್ಯ ನಗರದ ಶಾಂತಿನಗರ ಎಂಬಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಸ್ಥಳೀಯ ವ್ಯಕ್ತಿಯೋರ್ವರಿಗೆ ಕಾರಿನಲ್ಲಿ ಬಂದ ಅಪರಿಚಿತರು ಗುಂಡಿಕ್ಕಿದ್ದಾರೆ. ಗುಂಡೇಟು ತಗುಲಿದ ವ್ಯಕ್ತಿಯನ್ನು ಸಂಪತ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಸಾವಿಗೀಡಾದ ಸಂಪತ್ ಬಿಜೆಪಿ ಹಾಗೂ ಸಾಮಾಜಿಕ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಈತ ತನ್ನ ನಿವಾಸದಿಂದ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ದುಷ್ಕರ್ಮಿಗಳು ಆತನ ಮೇಲೆ ದಾಳಿ ನಡೆಸಿದ್ದಾರೆ.
ಮೊದಲು ಕಾರಿನ ಗ್ಲಾಸಿಗೆ ಗುಂಡು ಹಾರಿಸಿದ್ದಾರೆ. ಆ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್ಗೆ ತಾಗಿ ನಿಂತಿದೆ. ಅಲ್ಲಿಂದ ತಪ್ಪಿಸಿಕೊಂಡ ಸಂಪತ್ ಸಮೀಪದಲ್ಲಿದ್ದ ಕಾಂತಪ್ಪ ಎಂಬವರ ಮನೆಗೆ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೂ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದು ಗುಂಡು ಹಾರಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್ಐ ಹರೀಶ್ ಹಾಗು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಲ್ಕು ಜನರ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.