ಮಂಗಳೂರು: ಕಳ್ಳತನದ ಪ್ರಕರಣದ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟ ಘಟನೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮಂಗಳೂರಿನ ಉರ್ವ ನಿವಾಸಿ ರಾಜೇಶ್ (30) ಮೃತಪಟ್ಟ ಆರೋಪಿ. ಇಬ್ಬರು ಆರೋಪಿಗಳು ಇಂದು ಬೆಳಗ್ಗೆ ನಗರದ ಜ್ಯೋತಿ ಸರ್ಕಲ್ ಬಳಿಯಲ್ಲಿದ್ದ ಸ್ಮಾರ್ಟ್ ಸಿಟಿ ಕಾಮಗಾರಿಯ ಕಬ್ಬಿಣದ ಸರಳುಗಳನ್ನು ಕಳವು ಮಾಡಿ ಓಡುತ್ತಿದ್ದರು.
ಈ ಸಂದರ್ಭ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನಗರದ ಬಂದರು ಪೊಲೀಸ್ ಠಾಣೆಯಲ್ಲಿ ತಂದು ಕೂರಿಸಿದ್ದರು. ಆದರೆ, ಸಂಜೆ ವೇಳೆಗೆ ಆರೋಪಿಗಳಲ್ಲಿ ಒಬ್ಬ ರಾಜೇಶ್ ಎಂಬುವನಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಠಾಣೆಯಲ್ಲಿದ್ದ ಪೊಲೀಸರು ಆತನನ್ನು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಪಾಸಣೆ ಮಾಡಿದ ವೈದ್ಯರು ರಾಜೇಶ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ : ಕಾರವಾರ: ಸ್ಫೋಟಕ ಸಾಗಣೆ ಇಬ್ಬರ ಬಂಧನ !
ತಕ್ಷಣ ಆಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಆಸ್ಪತ್ರೆಯ ವೈದ್ಯರು ಹಾಗೂ ರಾಜೇಶ್ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ, ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ. ಠಾಣೆಯಲ್ಲಿರುವ ಎಲ್ಲ ಸಿಸಿ ಕ್ಯಾಮರಾದಲ್ಲಿ ದಾಖಲೆಗಳು ಲಭ್ಯವಿರುತ್ತದೆ. ಸೆಲ್ ಮುಂಭಾಗದಲ್ಲೂ ಸಿಸಿ ಕ್ಯಾಮರಾಗಳಿವೆ.
ಘಟನೆಯ ಬಗ್ಗೆ ಉತ್ತರ ವಿಭಾಗದ ಎ.ಸಿ.ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದೇನೆ. ಪೋಸ್ಟ್ ಮಾರ್ಟಂ ವರದಿಯನ್ನು ತಜ್ಞ ವೈದ್ಯರು ಚರ್ಚಿಸಿ ವರದಿ ನೀಡುತ್ತಾರೆ. ಬಳಿಕ ಸಿ.ಐ.ಡಿಯಿಂದ ಪ್ರಕರಣದ ಕುರಿತು ತನಿಖೆ ನಡೆಯುತ್ತದೆ ಎಂದು ಹೇಳಿದರು.