ಮಂಗಳೂರು: ಹಣವನ್ನು ಗುಟ್ಟಾಗಿ ಕೊಟ್ಟರೆ ಕೆಎಂಎಫ್ನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ನೂರಾರು ಮಂದಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ವರದಿಯಾಗಿದೆ. ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ರಾಮಪ್ರಸಾದ್ ರಾವ್ ಪಿ ಯಾನೆ ಹರೀಶ್ (37) ಪ್ರಮುಖ ಆರೋಪಿ. ಈತ ರಾಮಪ್ರಸಾದ್ ರಾವ್ ಅಲ್ಲದೆ ಹರೀಶ್, ಕೇಶವ, ಶಶಿಧರ್ ಎಂಬ ಹೆಸರಿನಲ್ಲೂ ಹಲವರನ್ನು ವಂಚಿಸಿದ್ದಾನೆ.
ಕೆಎಂಎಫ್ ನಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗ ದೊರಕಿಸಿಕೊಡುತ್ತೇನೆ. ಅದಕ್ಕಾಗಿ ಗುಟ್ಟಾಗಿ ಹಣ ನೀಡಬೇಕು ಎಂದು ಉದ್ಯೋಗಾಕಾಂಕ್ಷಿಗಳಿಗೆ ಆಸೆ ಹುಟ್ಟಿಸಿದ್ದ. ಈ ಹಿನ್ನೆಲೆಯಲ್ಲಿ ಹಲವು ಉದ್ಯೋಗಾರ್ಥಿಗಳನ್ನು ನಂಬಿಸಿ ಸುಮಾರು 1.84 ಕೋಟಿ ರೂ. ಹಣ ಪಡೆದುಕೊಂಡು ವಂಚಿಸಿದ್ದಾನೆ.
ಈತ ಹಣ ಪಡೆದು ಕೆಎಂಎಫ್ ಡೈರಿ ಸರಕಾರಿ ಸಂಸ್ಥೆಯ ನಕಲಿ ಉದ್ಯೋಗ ನೇಮಕಾತಿ ಪತ್ರ, ಕೆಎಂಎಫ್ ಐಡಿ ಕಾರ್ಡ್ ನೀಡಿ ಅವರಿಗೆ ಉದ್ಯೋಗ ಸಿಕ್ಕಿರುವಂತೆ ಭರವಸೆ ಮೂಡಿಸುತ್ತಿದ್ದ. ನಿಮ್ಮ ನೇಮಕಾತಿ ಆಗಿದೆ ಎಂದು ಹಲವು ಮಂದಿಗೆ ತರಬೇತಿಯನ್ನೂ ನೀಡಿದ್ದನಂತೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ: ಚಂದ್ರವತಿ ಎಂಬ ಮಹಿಳೆ ಫರಂಗಿಪೇಟೆ ವಳಚ್ಚಿಲ್ ಬಳಿಯ 31 ವರ್ಷದ ಯುವಕನಿಗೆ ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವ ಆಸೆ ಹುಟ್ಟಿಸಿ ಹಣ ಪಡೆದಿದ್ದರು. ಅವರು ಕೆ ಎಂ ಎಫ್ ನ ಕಿರಿಯ ನಿರ್ದೇಶಕ ಹರೀಶ್ ಎಂಬವರನ್ನು ಪರಿಚಯಿಸಿ ಅವರು ಉದ್ಯೋಗ ತೆಗೆಸಿಕೊಡುತ್ತಾರೆ ಎಂದು ಭರವಸೆ ನೀಡಿ ಹಣ ಪಡೆದಿದ್ದರು. ನೇಮಕಾತಿ ಪತ್ರ ಸಿಕ್ಕಿದ ಬಳಿಕ ಈ ವ್ಯಕ್ತಿ ತನ್ನ 5 ಮಂದಿ ಸ್ನೇಹಿತರಿಗೂ ಕೆಲಸ ನೀಡುವಂತೆ ವಿನಂತಿಸಿ ಅವರಿಂದಲೂ ಹಣ ಕೊಡಿಸಿದ್ದಾನೆ.
ಇದರ ಮಧ್ಯೆ ಉದ್ಯೋಗ ಕೊಡಲು ಸಾಧ್ಯವಾಗದೆ ಚಂದ್ರವತಿ ಇವರಿಂದ ಪಡೆದ ರೂ 10,70,000 ಹಣವನ್ನು ಚೆಕ್ ಮೂಲಕ ವಾಪಸ್ನೀಡಿದ್ದಳು. ಆದರೆ, ಆರೋಪಿ ರಾಮಪ್ರಸಾದ್ ರಾವ್ ಪಿ ಯಾನೆ ಹರೀಶ್ಗೆ ಫೋನ್ ಮಾಡಿ ತಾನು ಉದ್ಯೋಗ ನೀಡುವುದಾಗಿ ಮತ್ತೆ ಅದೇ ವ್ಯಕ್ತಿಯಿಂದ ರೂ 1.5 ಲಕ್ಷ ಮತ್ತು ಆತನ ಗೆಳೆಯರಿಂದ ರೂ 12 ಲಕ್ಷ ಪಡೆದಿದ್ದನು. ಆದರೆ, ಹಣ ಪಡೆದ ಆತ ಉದ್ಯೋಗ ನೀಡಿರಲಿಲ್ಲ. ಕೊನೆಗೆ ವಂಚನೆಗೊಳಗಾದ ವ್ಯಕ್ತಿ ಪೊಲೀಸ್ ದೂರು ನೀಡಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ರಾಮಪ್ರಸಾದ್ ರಾವ್ ಪಿ ಯಾನೆ ಹರೀಶ್, ಹೇಮಂತ್, ಸುರೇಂದ್ರ ರೆಡ್ಡಿ, ದರ್ಶನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಬಸ್ ನಿಲ್ದಾಣದಿಂದ ಗರ್ಭಿಣಿ ಅಪಹರಣ: ನಾಲ್ಕು ದಿನ ಅತ್ಯಾಚಾರವೆಸಗಿದ ಕಾಮುಕರು