ಸುಳ್ಯ: ತಾಲೂಕಿನ ಬೆಳ್ಳಾರೆಯ ವ್ಯಕ್ತಿಯೋರ್ವರು ಸರ್ಕಾರಿ ಬಸ್ನಲ್ಲಿ ಸಂಚರಿಸುವಾಗ ಸೊಂಟ ಮುರಿದುಕೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಬೆಳ್ಳಾರೆಯ ವಿಜಯ ಕುಮಾರ್ ಎಂಬುವರು ಸುಳ್ಯದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಕಾರ್ಯ ನಿಮಿತ್ತ ಮಂಗಳೂರಿಗೆ ಹೋಗಿ ವಾಪಸ್ ಸುಳ್ಯಕ್ಕೆ ಆಗಮಿಸುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕ ಬಳಿ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಗುಂಡಿಗಳು ಹೆಚ್ಚಿರುವ ಕಾರಣ ಬಸ್ ರಸ್ತೆ ಗುಂಡಿಗೆ ಬಿದ್ದಿದೆ. ವಿಜಯ ಕುಮಾರ್ ಹಿಂಬದಿ ಕುಳಿತಿದ್ದರಿಂದ ಅವರನ್ನು ಎತ್ತಿ ಹಾಕಿದ ಅನುಭವವಾಗಿದ್ದು, ಸೊಂಟದ ಸ್ಪರ್ಶಜ್ಞಾನ ಕಳೆದುಕೊಂಡಿದ್ದರು.
ಇದನ್ನೂ ಓದಿ: ರಸ್ತೆ ದುರವಸ್ಥೆ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಸುಗೂಸು ಸಾವು ಆರೋಪ.. ಸಿಎಂ ಮುಂದೆ ಕಣ್ಣೀರಿಟ್ಟ ಕುಟುಂಬ
ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ವಿಜಯ ಅವರನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅವರ ಬೆನ್ನು ಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಬಸ್ ಚಾಲಕನ ವಿರುದ್ಧ ದೂರು ದಾಖಲಾಗಿದೆ. "ಕೂಡಲೇ ರಸ್ತೆ ದುರಸ್ತಿಪಡಿಸಬೇಕು. ಹಾಗೂ ನನ್ನನ್ನು ಈ ಸ್ಥಿತಿಗೆ ತಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧವೂ ಪ್ರಕರಣ ದಾಖಲಾಗಬೇಕು. ನನ್ನ ಮಕ್ಕಳು, ಪತ್ನಿ ಸೇರಿದಂತೆ ಕುಟುಂಬದ ಸ್ಥಿತಿ ಏನು, ದುಡಿದು ನನ್ನ ಕುಟುಂಬವನ್ನು ಸಾಕುತ್ತೇನೆಂಬ ಭರವಸೆ ಇಲ್ಲ" ಅಂತಾ ಈಟಿವಿ ಭಾರತದೊಂದಿಗೆ ಆಸ್ಪತ್ರೆಯಿಂದಲೇ ವಿಜಯ ಅಳಲು ತೋಡಿಕೊಂಡಿದ್ದಾರೆ.
ಇತ್ತೀಚಿಗಷ್ಟೇ ರಾಷ್ಟ್ರೀಯ ಹೆದ್ದಾರಿ 75ರ ಬಿಕರ್ನಕಟ್ಟೆ ಎಂಬಲ್ಲಿ ರಸ್ತೆ ಗುಂಡಿಯಲ್ಲಿ ನೀರು ತುಂಬಿರೋದನ್ನು ಗಮನಿಸದೆ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದು ಅತೀಶ್ ಎಂಬ ಯುವಕ ಮೃತಪಟ್ಟಿದ್ದ. ಈ ಬಗ್ಗೆ ಅತೀಶ್ ಗೆಳೆಯ ಲಿಖಿತ್ ರೈ ಮಂಗಳೂರು ನಗರ ಪಾಲಿಕೆಯ ಎದುರು ರಸ್ತೆ ಗುಂಡಿ ಮುಚ್ಚಿಸುವಂತೆ ಏಕಾಂಗಿ ಪ್ರತಿಭಟನೆ ಮಾಡಿದ್ದರು.
ಇದನ್ನೂ ಓದಿ: ಕಡಬ ರಸ್ತೆ ಸಮಸ್ಯೆ.. ಆಸ್ಪತ್ರೆಗೆ ಅನಾರೋಗ್ಯ ಪೀಡಿತ ವೃದ್ಧೆ ಹೊತ್ತು ಸಾಗಿದ ಗ್ರಾಮಸ್ಥರು