ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಮಸೀದಿ ನವೀಕರಣ ಸಂದರ್ಭ ಕಂಡು ಬಂದ ದೇವಾಲಯ ಶೈಲಿಯ ಕುರುಹು ಹಿನ್ನೆಲೆಯಲ್ಲಿ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ವಿಚಾರಣೆಯ ಆದೇಶವನ್ನು ಆಗಸ್ಟ್ 1ಕ್ಕೆ ಕಾಯ್ದಿರಿಸಿದ್ದು, ಅಂದು ಆದೇಶ ಹೊರಬೀಳುವ ಸಾಧ್ಯತೆ ಇದೆ.
ಮಸೀದಿ ನವೀಕರಣದ ವೇಳೆ ದೇವಸ್ಥಾನದ ಕುರುಹು ಪತ್ತೆಯಾದ ಮಳಲಿ ಮಸೀದಿಯ ಸರ್ವೆ ನಡೆಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಮಸೀದಿ ಪರ ವಕೀಲರು ವಿರೋಧಿಸಿ, ವಕ್ಫ್ ಬೋರ್ಡ್ ಅಧೀನದಲ್ಲಿ ಮಸೀದಿ ಇರುವುದರಿಂದ ಮರು ಸರ್ವೇ ನಡೆಸಲು ಅವಕಾಶ ನೀಡದೆ, ನವೀಕರಣ ಕಾಮಗಾರಿ ಮುಂದುವರೆಸಲು ಅವಕಾಶ ನೀಡುವಂತೆ ಪ್ರತಿವಾದ ಮಂಡಿಸಿದ್ದರು.
ಇದರ ಮಧ್ಯೆ ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಸ್ಥಳೀಯರಾದ ಮನೋಜ್ ಕುಮಾರ್ ಧನಂಜಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಇದರ ಆದೇಶದ ಪ್ರತಿಯನ್ನು ಮಸೀದಿ ಪರ ವಕೀಲರು ಶುಕ್ರವಾರ ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಹೈಕೋರ್ಟ್‌ನ ಆದೇಶ ಪ್ರತಿಯನ್ನು ಸ್ವೀಕರಿಸಿದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಆದೇಶವನ್ನು ಆ. 1ಕ್ಕೆ ಮುಂದೂಡಿದ್ದು, ಅಂದು ತೀರ್ಪು ಹೊರಬೀಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಸಹೋದರರಿಂದಲೇ ಅಪ್ರಾಪ್ತೆ ಗರ್ಭಿಣಿ.. ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ