ಮಂಗಳೂರು: ಮಂಗಳೂರಿನ ಹೊರವಲಯದ ಗಂಜಿಮಠದ ಮಳಲಿ ಎಂಬಲ್ಲಿ ಮಸೀದಿಯ ನವೀಕರಣದ ವೇಳೆ ಪತ್ತೆಯಾದ ದೇಗುಲ ಶೈಲಿಯ ಕಟ್ಟಡದ ವಿಚಾರಕ್ಕೆ ಸಂಬಂಧಿಸಿದಂತೆ, ಮಸೀದಿ ಆಡಳಿತ ಸಮಿತಿಯೊಂದಿಗೆ ವಿಶ್ವಹಿಂದೂ ಪರಿಷತ್ ಮುಖಂಡರು, ಶಾಸಕರು ಸಭೆ ನಡೆಸಿದರು. ತಾಂಬೂಲ ಪ್ರಶ್ನೆ ಬಳಿಕ ವಿಶ್ವ ಹಿಂದೂ ಪರಿಷತ್ ಮುಖಂಡರು ಮತ್ತು ಶಾಸಕ ಭರತ್ ಶೆಟ್ಟಿ ಸಭೆ ನಡೆಸಿದ್ದಾರೆ.
ಮಸೀದಿಯಲ್ಲಿ ದೇಗುಲ ಶೈಲಿ ಪತ್ತೆಯಾದ ಬಳಿಕ ಇದರ ಕಾಮಗಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಮಧ್ಯೆ ಹಿಂದೂ ಸಂಘಟನೆಗಳು ಮಳಲಿಯ ಶ್ರೀರಾಮಾಂಜನೆಯ ಭಜನಾ ಮಂದಿರದಲ್ಲಿ, ಹಿಂದೂಗಳ ಧಾರ್ಮಿಕ ನಂಬಿಕೆಯಲ್ಲೊಂದಾದ ಜ್ಯೋತಿಷ್ಯದ ಉನ್ನತ ಸ್ಥಾನದಲ್ಲಿರುವ ತಾಂಬೂಲ ಪ್ರಶ್ನೆಯನ್ನು ಇರಿಸಿದ್ದರು. ಈ ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯು ಹಿಂದೆ ಗುರು ಮಠವಾಗಿದ್ದು, ಅಲ್ಲಿ ಶಿವನನ್ನು ಆರಾಧಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಈ ಸಭೆಯಲ್ಲಿ ಎರಡು ಕಡೆಯಿಂದಲೂ ವಿಚಾರ ವಿಮರ್ಶೆಗಳು ನಡೆದವು. ಸಭೆಯ ಬಳಿಕ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರು, ಸಭೆಯಲ್ಲಿ ನಮ್ಮ ನಿಲುವನ್ನು ಅವರಿಗೆ ತಿಳಿಸಲಾಗಿದೆ. ಮುಸ್ಲಿಂ ಮುಖಂಡರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಮುಸ್ಲಿಂ ಮುಖಂಡರುಗಳು ಅವರ ಪ್ರಮುಖರ ಜೊತೆಗೆ ಚರ್ಚಿಸುವ ಬಗ್ಗೆ ತಿಳಿಸಿದ್ದಾರೆ. ಸೌಹಾರ್ದಯುತವಾಗಿ ನಡೆದ ಸಭೆಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಲಡಾಖ್‌ನಲ್ಲಿ ಸೇನಾ ಬಸ್ ದುರಂತ ಪ್ರಕರಣ : ಚಾಲಕನ ಪಾತ್ರದ ಬಗ್ಗೆ ತನಿಖೆ