ಮಂಗಳೂರು: ನಗರದಲ್ಲಿ ಡಿಸೆಂಬರ್ 19ರಂದು ನಡೆದ ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಮೃತಪಟ್ಟ ಘಟನೆ ಬಗ್ಗೆ ಇಂದು (ಡಿ.07) ನಗರದ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೀಯಲ್ ವಿಚಾರಣೆ ನಡೆಸಿದರು. ಸುಮಾರು 14 ಸಾಕ್ಷಿದಾರರು ಘಟನೆಯ ಬಗ್ಗೆ ಲಿಖಿತ ರೂಪದಲ್ಲಿ, ದಾಖಲೆ ಸಹಿತ ಸಾಕ್ಷಿ ನೀಡಿದ್ದಾರೆ.
ಗೋಲಿಬಾರ್ಗೆ ಸಂಬಂಧಿಸಿದಂತೆ ಜಿಲ್ಲಾ ದಂಡಾಧಿಕಾರಿ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಮ್ಯಾಜಿಸ್ಟ್ರೀಯಲ್ ವಿಚಾರಣೆಯ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಈ ಮೂಲಕ ಪೊಲೀಸ್ ಇಲಾಖೆಯ ಸಂಪೂರ್ಣ ದಾಖಲೆ, ವೈದ್ಯರ ಪೋಸ್ಟ್ ಮಾರ್ಟಮ್ ವರದಿ ಹಾಗೂ ಸಾರ್ವಜನಿಕರ ಸಾಕ್ಷಿಗಳನ್ನು ಕ್ರೋಢೀಕರಿಸಿ ಸುಪ್ರೀಂಕೋರ್ಟ್ ಹಾಗೂ ಮಾನವ ಹಕ್ಕು ಆಯೋಗ ನೀಡಿದ ಮಾಹಿತಿ ಪ್ರಕಾರ ತನಿಖೆ ನಡೆಸಿ 3 ತಿಂಗಳೊಳಗೆ ಸರ್ಕಾರಕ್ಕೆ ವರದಿ ನೀಡುವಂಯೆ ಆದೇಶ ನೀಡಲಾಗಿತ್ತು.
ಆದ್ದರಿಂದ ತನಿಖಾಧಿಕಾರಿ ಜಿ.ಜಗದೀಶ್ ಘಟನೆಯ ಬಗ್ಗೆ ಮಾಹಿತಿಯುಳ್ಳ ಹಾಗೂ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾರಾದರೂ ಇದ್ದಲ್ಲಿ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯದಲ್ಲಿ ಇಂದು ಬೆಳಗ್ಗೆ 11 ರಿಂದ 1.30 ಒಳಗೆ ಹಾಜರಾಗಿ, ಸಾಕ್ಷ್ಯ ನೀಡಬಹುದು ಎಂದು ಡಿಸೆಂಬರ್ 30ರಂದು ಪ್ರಕಟಣೆ ಮೂಲಕ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮ್ಯಾಜಿಸ್ಟ್ರೀಯಲ್ ವಿಚಾರಣೆಯ ಮೂಲಕ ಅವರು ತನಿಖೆ ನಡೆಸಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕಾರಿಗಳ ಹಾಗೂ ವೈದ್ಯರ ಮಾಹಿತಿಗಳನ್ನು ಪಡೆಯಲು ಬೇರೊಂದು ದಿನವನ್ನು ನಿಗದಿಪಡಿಸಲಾಗುವುದು. ಈ ತನಿಖೆಯನ್ನು ಗೋಲಿಬಾರ್ ನಡೆಸಿರೋದು ಹಾಗೂ ಪೊಲೀಸ್ ಇಲಾಖೆಗೆ ಗೋಲಿಬಾರ್ ನಡೆಸುವ ಅಗತ್ಯವಿತ್ತೇ ಎಂಬ ತನಿಖೆಯನ್ನು ನಡೆಸಲಾಗುವುದು. ಆದರೆ, ಸಿಐಡಿ ತನಿಖೆಗೂ, ಮ್ಯಾಜಿಸ್ಟ್ರೀಯಲ್ ತನಿಖೆಗೂ ಯಾವುದೇ ಸಂಬಂಧವಿಲ್ಲ. ಪೊಲೀಸರು ನೀಡುವ ಪೊಲೀಸ್ ಡೈರಿ, ಎಫ್ಐಆರ್ ದಾಖಲೆ, ಅಗತ್ಯವಿದ್ದಲ್ಲಿ ಸಿಸಿಟಿವಿ ಕ್ಯಾಮರಾ ದಾಖಲೆ, ವೈದ್ಯಕೀಯ ದಾಖಲೆ ಜೊತೆಗೆ ಪ್ರತ್ಯಕ್ಷದರ್ಶಿಗಳ ಸಾಕ್ಷಿಗಳನ್ನು ಪರಿಗಣಿಸಿ, ಸಂಪೂರ್ಣ ದಾಖಲೆಗಳನ್ನು ಇರಿಸಿ ತನಿಖೆ ನಡೆಸಿ ಮಾರ್ಚ್ 23 ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿ ಜಿ.ಜಗದೀಶ್ ಹೇಳಿದರು.