ETV Bharat / state

'ಮನ್ ಕೀ ಬಾತ್' ಪ್ರೇರಣೆಯಿಂದ ಬೃಹತ್ ಕೆರೆ ನಿರ್ಮಾಣ: ಸ್ವಂತ ದುಡಿಮೆಯ ದುಡ್ಡನ್ನು ವಿನಿಯೋಗಿಸಿದ ಮಾಧವ ಭಟ್ - ಮಂಗಳೂರು ರೈತನಿಂದ ಕೆರೆ ನಿರ್ಮಾಣ

ದಕ್ಷಿಣ ಕನ್ನಡ ಜಿಲ್ಲೆಯ ಕುಲ್ಲಂಗಾಲು ನಿವಾಸಿ ಮಾಧವ ಭಟ್​ ತನ್ನ ಸ್ವಂತ ಹಣದಿಂದ ಮನೆ ಬಳಿ ಬೃಹತ್ ಕೆರೆಯೊಂದನ್ನು ನಿರ್ಮಿಸಿದ್ದಾರೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿರುವ ಈ ಕೆರೆಯಲ್ಲಿ 1 ಕೋಟಿ 75 ಲಕ್ಷ ಲೀಟರ್ ನೀರು ತುಂಬುವ ಸಾಧ್ಯತೆಯಿದೆ.

Madhav Bhat From Mangaluru built a lake with his own earnings
ಸ್ವಂತ ಹಣದಲ್ಲಿ ಬೃಹತ್ ಕೆರೆ ನಿರ್ಮಾಣ ಮಾಡಿದ ಮಾಧವ ಭಟ್
author img

By

Published : Apr 22, 2021, 12:43 PM IST

ಮಂಗಳೂರು: ಜೀವನದಲ್ಲಿ ಎಷ್ಟು ಹಣ ಸಂಪಾದಿಸಿದರೂ ಯಾರಿಗೂ ತೃಪ್ತಿ ಎಂಬುವುದೇ ಇರುವುದಿಲ್ಲ‌. ಮಕ್ಕಳಿಗೆ, ಮೊಮ್ಮಕ್ಕಳಿಗೆ ಎಂದು ಮತ್ತೆ ಮತ್ತೆ ಸಂಗ್ರಹಿಸುವವರೇ ಅಧಿಕ‌ ಮಂದಿ. ಆದರೆ, ಇಲ್ಲೊಬ್ಬರು 'ಕೆರೆಯ ನೀರನು ಕೆರೆಗೆ ಚೆಲ್ಲಿ' ಎಂದು ದಾಸವರೇಣ್ಯ ಪುರಂದರದಾಸರು ಹೇಳಿದಂತೆ‌ ಬದುಕಿ‌ ತೋರಿಸಿದ್ದಾರೆ. ಈ ಮೂಲಕ‌ ತಮ್ಮ ಸ್ವಂತ ದುಡಿಮೆಯ ದುಡ್ಡನ್ನೆಲ್ಲಾ ಸುರಿದು ಬೃಹತ್ ಕೆರೆಯೊಂದನ್ನು ನಿರ್ಮಿಸಿ ಅಂತರ್ಜಲ ಹೆಚ್ಚಳ ಮಾಡಲು ಸಂಕಲ್ಪ ಕೈಗೊಂಡಿದ್ದಾರೆ‌.

ನಗರದ ಸುರತ್ಕಲ್ ಸಮೀಪದ ಕಾಟಿಪಳ್ಳ ಸರ್ಕಲ್​ನಿಂದ ಸೂರಿಂಜೆಗೆ ಹೋಗುವ ದಾರಿಯಲ್ಲಿ ಒಂದು ಕಿ.ಮೀ. ದೂರ ಕ್ರಮಿಸಿದರೆ ಕುಲ್ಲಂಗಾಲು ಎಂಬ ಪರಿಸರದಲ್ಲಿ ಈ ಕೆರೆಯನ್ನು ಕಾಣಬಹುದು. ಕುಲ್ಲಂಗಾಲು ಮಾಧವ ಭಟ್ಟರ ಕನಸಿನ ಸಾಕಾರ ರೂಪವಾಗಿ ಈ ಕೆರೆ ನಿರ್ಮಾಣವಾಗಿದೆ. ಸುಮಾರು ಎರಡುವರೆ ಎಕರೆ ವಿಸ್ತಾರವಾದ ಪ್ರಕೃತಿಯ ರಮ್ಯ ಪರಿಸರದ ನಡುವೆ ಕೆರೆ ಇರುವ ಈ ಪ್ರದೇಶಕ್ಕೆ ನಾಗಳಿಕೆ ಎಂದು ಹೆಸರು. ಕೆರೆಯ ಪೂರ್ತಿ ಕಾಮಗಾರಿ ಮುಗಿದಿದ್ದು, ಇದೇ ತಿಂಗಳು 28-29 ರಂದು ಉದ್ಘಾಟನೆ ನಡೆಯಲಿದೆ. ಈ ವರ್ಷ ಮಾಧವ ಭಟ್ಟರಿಗೆ 60 ವರ್ಷ ತುಂಬಲಿದ್ದು, ಅದಕ್ಕಾಗಿ ಷಷ್ಠಿಪೂರ್ತಿ, ಶಾಂತಿ ಎಂದು ಅನಗತ್ಯ ಖರ್ಚು ಮಾಡದೆ ಕೆರೆಯೊಂದನ್ನು ನಿರ್ಮಾಣ ಮಾಡಿ ಸಂತಸ ಪಡುತ್ತಿದ್ದಾರೆ.

ಸ್ವಂತ ಹಣದಲ್ಲಿ ಬೃಹತ್ ಕೆರೆ ನಿರ್ಮಾಣ ಮಾಡಿದ ಮಾಧವ ಭಟ್

ಕೆರೆ ನಿರ್ಮಾಣಕ್ಕಾಗಿ ಕೆ.ಮಾಧವ ಭಟ್ಟರು‌ ತಾವು ಜೀವನಪೂರ್ತಿ ದುಡಿದ ಹಣವನ್ನು ವಿನಿಯೋಗಿಸಿದ್ದಾರೆ. 50 ಲಕ್ಷ ರೂ. ವೆಚ್ಚದಲ್ಲಿ ಕೆರೆ ನಿರ್ಮಾಣದ ಕನಸು ಕಂಡಿದ್ದರೂ, ಗಾರೆ ಕೆಲಸದವರು, ಮೇಸ್ತ್ರಿ, ಸೆಂಟ್ರಿಂಗ್, ಇನ್ನಿತರ ಖರ್ಚು-ವೆಚ್ಚಗಳಲ್ಲಿ ಮಾಧವ ಭಟ್ಟರು ಅಂದುಕೊಂಡದ್ದಕ್ಕಿಂತ ಕಡಿಮೆ ಖರ್ಚಾದ ಪರಿಣಾಮ ಇನ್ನೂ ಹಣ ಉಳಿಕೆಯಾಗಿದೆಯಂತೆ. ಆ ಹಣವನ್ನು ಕೆರೆಯ ಸುತ್ತಲೂ ಸಸ್ಯ ಸಂಪತ್ತು ಬೆಳೆಸಲು ವಿನಿಯೋಗಿಸುತ್ತಾರಂತೆ.

ಕೆರೆ ನಿರ್ಮಾಣಕ್ಕೆ ಮನ್ ಕೀ ಬಾತ್ ಹಾಗೂ ಆಧ್ಯಾತ್ಮಿಕ ಚಿಂತನೆ ಪ್ರೇರಣೆ

ಪ್ರಧಾನಿ ನರೇಂದ್ರ ಮೋದಿಯವರು 'ಮನ್ ಕೀ ಬಾತ್' ನಲ್ಲಿ ಅಂತರ್ಜಲ ಹೆಚ್ಚಳದ ಬಗ್ಗೆ ಮಾತನಾಡಿರುವುದನ್ನು ಕೇಳಿ ಪ್ರೇರಣೆಗೊಂಡು ಕೆ.ಮಾಧವ ಭಟ್ಟರು ಈ ಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರಂತೆ. ಅದಷ್ಟೇ ಅಲ್ಲದೆ ತಾವು ಪ್ರತಿನಿತ್ಯ ಮಾಡುವ ಯೋಗ ಹಾಗೂ ಆಧ್ಯಾತ್ಮಿಕ ಚಿಂತನೆಗಳೂ ಇದಕ್ಕೆ ಮೂಲ ಕಾರಣವೆನ್ನುತ್ತಾರೆ. ಜೊತೆಗೆ ಮಾಧವ ಭಟ್ಟರ ತಂದೆ ವೆಂಕಟರಾಜ ಭಟ್ ಕುಲ್ಲಂಗಾಲು ಅವರು ಆಷಾಢ ಮಾಸದಲ್ಲಿ ಈಗ ಕೆರೆಯಿರುವ ಸ್ಥಳದಲ್ಲಿದ್ದ ನಾಗಬನದ ಬಳಿಯಲ್ಲಿ ಧ್ಯಾನ ಮಾಡುತ್ತಿದ್ದು, ಅದರ ಪ್ರೇರಣೆಯಿಂದ ಮಾಧವ ಭಟ್ಟರೂ ಆದಿತ್ಯವಾರ ಈ ಸ್ಥಳಕ್ಕೆ ಬಂದು ನಮಸ್ಕರಿಸಿ ಹೋಗುತ್ತಿದ್ದಾರೆ. ಒಂದು ಬಾರಿ ಇಲ್ಲಿಗೆ ಬಂದಾಗ ಇಲ್ಲಿದ್ದ ಸಣ್ಣ ಮದಕ (ಹಳ್ಳ)ದಲ್ಲಿ ಎರಡು ಹಾವುಗಳು ಈಜಾಡುತ್ತಿತ್ತಂತೆ, ಅಂದೇ ಇಲ್ಲೊಂದು ಇಂಗು ಗುಂಡಿ ಮಾಡಬಹುದು ಎಂದು ಸಂಕಲ್ಪ ಮಾಡಿದ್ದರು. ಅದು ಈಗ ಕೆರೆ ನಿರ್ಮಾಣದ ಮೂಲಕ ಸಾಕಾರಗೊಂಡಿದೆ.

1 ಕೋಟಿ 75 ಲಕ್ಷ ಲೀಟರ್ ನೀರು ತುಂಬುವ ಸಾಧ್ಯತೆ

ಇದೇ ವರ್ಷ ಜನವರಿ 20ರಂದು ಕೆರೆಯ ಕಾಮಗಾರಿ ಆರಂಭ ಮಾಡಿದ್ದು, 2 ತಿಂಗಳು 20 ದಿನಗಳಲ್ಲಿ ಪೂರ್ಣಗೊಂಡಿದೆ. ಕೆರೆಯು 30 ಅಡಿ ಆಳ, 125 ಅಡಿ ಅಗಲ, 140 ಅಡಿ ಉದ್ದವಿದ್ದು, 1 ಕೋಟಿ 75 ಲಕ್ಷ ಲೀಟರ್ ನೀರು ತುಂಬುವ ಸಾಧ್ಯತೆ ಇದೆ. ಇದರಿಂದ ಸುತ್ತಮುತ್ತಲಿನ ಮೂರು ಕಿ.ಮೀ.ವ್ಯಾಪ್ತಿಯ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಲಿದೆ. ಅಲ್ಲದೆ ವನ್ಯಸಂಪತ್ತುಗಳಾದ ಮರಗಿಡ ಬಳ್ಳಿಗಳು ಯಥೇಚ್ಛವಾಗಿ ಬೆಳೆಯುವುದಲ್ಲದೆ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿ, ಉರಗ, ಸರೀಸೃಪಗಳಿಗೂ ನೀರಿನ ಮೂಲವೊಂದು ದೊರಕಿದಂತಾಗುತ್ತದೆ‌ ಎಂದು ಹೇಳುತ್ತಾರೆ ಕೆ. ಮಾಧವ ಭಟ್ಟರು.

ಈ‌ ಕೆರೆಗೆ ಅದರ ಕಾಂಕ್ರಿಟ್ ಬದುವಿಗೆ ತೊಂದರೆಯಾಗದಂತೆ ಬೆಟ್ಟಗುಡ್ಡಗಳಿಂದ ಮೂರುಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಬರಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ‌ ಯಾವುದೇ ತ್ಯಾಜ್ಯ, ತರಗಲೆಗಳು ಕೆರೆಯನ್ನು ಸೇರದಂತೆ ಫಿಲ್ಟರ್ ಆಗಿಯೇ ನೀರು ಕೆರೆಗೆ ಹರಿಯಲು ವ್ಯವಸ್ಥೆ ಮಾಡಲಾಗಿದೆ. ಕೆರೆಯನ್ನು ನಾಲ್ಕು ಕಡೆಯೂ ಎರಡು ಸಾಲು ಡಬ್ಬಲ್ ಲಾಕ್ ಮಾಡಿ ಕೆಂಪು ಕಲ್ಲಿನಿಂದ ಬಲಿಷ್ಠವಾಗಿ ಕಟ್ಟಲಾಗಿದೆ. ಅಲ್ಲದೆ ಮಣ್ಣು ಕುಸಿಯುವ ಸಾಧ್ಯತೆ ಇರುವಲ್ಲಿ ಕಾಂಕ್ರೀಟ್ ಅಳವಡಿಸಿ ಭದ್ರಪಡಿಸಲಾಗಿದೆ. ಅದಲ್ಲದೆ ಜೋರು ಮಳೆ ಬಂದ ಸಂದರ್ಭದಲ್ಲಿ ಕೆರೆಯಲ್ಲಿ ನೀರು ಹೆಚ್ಚಾದಲ್ಲಿ ಹೊರಗೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ‌.

ಕೆರೆಯೊಳಗೆ ಸಣ್ಣ ಬಾವಿ

ಕೆರೆಯ ಕಾಮಗಾರಿ ನಡೆಯುವ ಸಮಯ ಕೆರೆಯ ಮಧ್ಯದಲ್ಲೊಂದು ಕಡೆಗೆ ಹಿಟಾಚಿಯಲ್ಲಿ ಅಗೆದಾಗ ನೀರಿನ ಒಸರು ಕಂಡಿತು. ಆದ್ದರಿಂದ ಅಲ್ಲೊಂದು ಸಣ್ಣದಾದ, ಸುಂದರ ಬಾವಿಯೊಂದನ್ನು ನಿರ್ಮಾಣ ಮಾಡಲು ಸಂಕಲ್ಪ ಮಾಡಿಯೇ ಬಿಟ್ಟರಂತೆ ಮಾಧವ ಭಟ್ಟರು. ಇದೀಗ ಈ ಬಾವಿಯಲ್ಲಿ ಗಾಢ ಹಸಿರು ಬಣ್ಣದ ತಿಳಿಯಾದ ಸ್ವಚ್ಛ ನೀರು ಶೇಖರಣೆಯಾಗಿದ್ದು, ಈ ಬೇಸಿಗೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ಮೂಲವೊಂದು ದೊರಕಿದಂತಾಗಿದೆ.

ನೈಸರ್ಗಿಕ ನಾಗಬನ

ಇಲ್ಲಿಯೇ ಸಮೀಪದಲ್ಲಿ ಕುಲ್ಲಂಗಾಲು ಮಾಧವ ಭಟ್ಟರ ಕುಟುಂಬದ ನಾಗಬನವೊಂದು ಇದ್ದು, ಅದನ್ನು ನೈಸರ್ಗಿಕ ವನಗಳ ಮಧ್ಯೆಯೇ ಅಲ್ಪಸ್ವಲ್ಪ ಅಭಿವೃದ್ಧಿ ಮಾಡಿ ಗಿಡಮರಗಳಿಗೆ ಯಾವುದೇ ತೊಂದರೆಗಳಾಗದಂತೆ ನಿರ್ಮಾಣ ಮಾಡಲಾಗಿದೆ. ಇಲ್ಲಿಯ ನಾಗರಾಜನೇ ತನ್ನಿಂದ ಕೆರೆಯ ನಿರ್ಮಾಣ ಕಾರ್ಯವನ್ನು ಮಾಡಿಸಿದ್ದಾನೆಯೇ ಹೊರತು ತಾನು ನಿಮಿತ್ತ ಮಾತ್ರ ಎಂದು ಭಟ್ಟರು ಹೇಳುತ್ತಾರೆ.

ಸ್ವಲ್ಪ ಸ್ಥಳವಿದ್ದರೂ ಸೈಟ್​ಗಳನ್ನಾಗಿ ಮಾಡಿ ಮಾರಾಟ ಮಾಡಿ ಸಾಕಷ್ಟು ಹಣಗಳಿಸುವ ಆಲೋಚನೆ ಮಾಡುವ ಈ ಕಾಲದಲ್ಲಿ,‌ ಮಾಧವ ಭಟ್ಟರು ಮಾತ್ರ ಇದಕ್ಕೆ ಅಪವಾದವೆಂಬಂತೆ ಮಹತ್ತರವಾದ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕೆ ಅವರ ಮನೆಯವರ ಸಹಕಾರವೂ ಇದೆ ಎಂಬುವುದು ಮೆಚ್ಚುವಂತದ್ದೇ. ಇಂಥವರ 'ಸಂತತಿ ಸಾವಿರ'ವಾಗಲಿ ಎಂಬ ದಾಸವಾಣಿ ನಿಜವಾಗಲಿ ಎಂಬುವುದೇ ಈಟಿವಿ ಭಾರತದ ಆಶಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.