ಮಂಗಳೂರು ; ತಾವರೆ ಬೆಳೆಯುವುದು ಕೆಸರಿನಲ್ಲಿ. ಆದರೆ, ಹಳ್ಳದಲ್ಲಿ ಕಾಣಸಿಗುವ ಈ ತಾವರೆಗಳನ್ನು ತಾರಸಿಯಲ್ಲಿ ಬೆಳೆಯುವ ಪ್ರಯೋಗ ಮಾಡಿ ಮಂಗಳೂರಿನ ಉಪನ್ಯಾಸಕಿಯೊಬ್ಬರು ಯಶಸ್ವಿಯಾಗಿದ್ದಾರೆ. ಇವರ ತಾರಸಿಯಲ್ಲಿ ತಾವರೆ ಸೇರಿ ವಿವಿಧ ಬಗೆಯ ಜಲ ಸಸ್ಯಗಳು ಗಮನ ಸೆಳೆಯುತ್ತಿವೆ.
ಮಂಗಳೂರಿನ ಹೊರ ವಲಯದಲ್ಲಿರುವ ಈ ಮನೆಯ ತಾರಸಿಗೆ ಹೋದರೆ ಮನಮೋಹಕ ಹೂಗಳ ತೋಟ ಗಮನ ಸೆಳೆಯುತ್ತವೆ. ಸ್ನೇಹಾ ಭಟ್ ಎಂಬುವರು ತಾರಸಿಯನ್ನ ಹೂ ತೋಟವನ್ನಾಗಿ ಮಾಡಿದ್ದಾರೆ. ಮಂಗಳೂರಿನ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಮತ್ತು ಆಕಾಶವಾಣಿ ಉದ್ಘೋಷಕಿಯಾಗಿರುವ ಸ್ನೇಹಾ ಭಟ್ ಅವರು, ತಮ್ಮ ಮನೆಯಲ್ಲಿ ತಾವರೆ ಹೂಗಳನ್ನು ಅರಳಿಸಿದ್ದಾರೆ. ಇಲ್ಲಿ ಪ್ಲಾಸ್ಟಿಕ್ ಟಬ್ಗಳಲ್ಲಿ 85ಕ್ಕೂ ಅಧಿಕ ತಾವರೆಗಳನ್ನು ಬೆಳೆಸಿದ್ದಾರೆ. ಇಲ್ಲಿ ಇರುವ 150 ಪ್ಲಾಸ್ಟಿಕ್ ಟಬ್ಗಳಲ್ಲಿ 88 ಬಗೆಯ ಹೂ ಗಿಡಗಳು ಕಂಗೊಳಿಸುತ್ತಿವೆ.
ಕೆಸರಿನಲ್ಲಿ ಬೆಳೆಯುವ ತಾವರೆಗಳನ್ನು ಮನೆಯಲ್ಲಿ ಬೆಳೆಸುವ ಪ್ರಯೋಗಕ್ಕೆ ಕೈ ಹಾಕಿ ಇವರು ಯಶಸ್ವಿಯಾಗಿದ್ದಾರೆ. ತಾವರೆ ಹೂಗಳು ಫೆಬ್ರವರಿಯಿಂದ ಆಗಸ್ಟ್ವರೆಗೆ ಮಾತ್ರ ಹೂ ಬಿಡುತ್ತವೆ. ಉಳಿದ ಅವಧಿಯಲ್ಲಿ ತಾವರೆ ಗಿಡಗಳಿಗೆ ವಿಶ್ರಾಂತ ಸಮಯ. ಸುಮಾರು 8 ವರ್ಷಗಳಿಂದ ತಾವರೆ ಸೇರಿದಂತೆ ವಿವಿಧ ಹೂಗಳ ತೋಟ ಮಾಡಿ ಸ್ನೇಹಾ ಯಶಸ್ವಿಯಾಗಿದ್ದಾರೆ.
ತಾವರೆ ಗಿಡದ ಪ್ರತಿಯೊಂದು ಭಾಗಕ್ಕೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ. ಆದರೆ, ತಮ್ಮ ಹವ್ಯಾಸವಾಗಿ ಮಾಡಿರುವ ಈ ತೋಟದಿಂದ ಸ್ನೇಹಾ ಭಟ್ ಯಾವುದೇ ವಾಣಿಜ್ಯ ವ್ಯವಹಾರ ಮಾಡುತ್ತಿಲ್ಲ. ಈ ರೀತಿಯ ಪ್ರಯೋಗವನ್ನು ಮನೆಯಲ್ಲಿ ಮಹಿಳೆಯರು, ಕೆಲಸ ಕಳೆದುಕೊಂಡವರು ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯ ಎನ್ನುತ್ತಾರೆ ಸ್ನೇಹಾ ಭಟ್.