ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ಭಟ್ ವಿದೇಶಕ್ಕೆ ಪರಾರಿಯಾಗದಂತೆ ಪೊಲೀಸರು ಬೇಹುಗಾರಿಕಾ ಸಂಸ್ಥೆಯ (ಐಬಿ) ಮೂಲಕ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಅವರ 12 ಬ್ಯಾಂಕ್ ಅಕೌಂಟ್ಗಳನ್ನು ಫ್ರೀಝ್ ಮಾಡಲಾಗಿದೆ.
ರಾಜೇಶ್ ಪತ್ತೆಗಾಗಿ ಎಸಿಪಿ ರಂಜಿತ್ ಬಂಡಾರು ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಆರೋಪಿ ದೇಶ ಬಿಟ್ಟು ಎಲ್ಲೂ ಹೊರಗೆ ಹೋಗದಂತೆಯೂ ಎಚ್ಚರ ವಹಿಸಲಾಗಿದೆ. ರಾಜೇಶ್ ಭಟ್ ಆಂಧ್ರಪ್ರದೇಶ, ತಮಿಳುನಾಡು ಮುಂತಾದ ಕಡೆಗಳಲ್ಲಿ ತಲೆಮರೆಸಿಕೊಂಡಿರುವುದು ತಿಳಿದು ಬಂದಿದೆ. ಆದ್ದರಿಂದ ತಮಿಳು, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಆರೋಪಿ ವಕೀಲನ 12 ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡಲಾಗಿದೆ. ಈ ಮೂಲಕ ಆತ ಯಾವುದೇ ರೀತಿಯಲ್ಲಿ ಬ್ಯಾಂಕ್ನಿಂದ ಹಣ ಪಡೆದು ಪರಾರಿಯಾಗದಂತೆ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಖ್ಯಾತ ವಕೀಲನ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಯ ಕಣ್ಮರೆಗೆ ಸಹಕರಿಸಿದ ಓರ್ವನ ಬಂಧನ
ಸಂತ್ರಸ್ತ ವಿದ್ಯಾರ್ಥಿನಿ ಅ.18ರಂದು ಪೊಲೀಸರಿಗೆ ದೂರು ನೀಡಿದ್ದರೂ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರಿಗೆ ಈವರೆಗೂ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಕೆ.ಎಸ್.ಎನ್ ರಾಜೇಶ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.