ಪುತ್ತೂರು (ದಕ್ಷಿಣ ಕನ್ನಡ): ಸ್ಥಳೀಯವಾಗಿ ಕ್ರಿಕೆಟ್ ಆಡುತ್ತಿದ್ದ ಎರಡು ತಂಡಗಳ ನಡುವೆ ಮೈದಾನದಲ್ಲಿ ಆರಂಭವಾದ ಮಾತಿನ ಚಕಮಕಿ ತಾರಕಕ್ಕೇರಿ, ರಾತ್ರಿ ಸಮೀಪದ ಅಂಗಡಿಯೊಂದರ ಬಳಿ ಹೊಡೆದಾಟಕ್ಕೆ ತಿರುಗಿ ವ್ಯಕ್ತಿಯೊಬ್ಬರು ಕೋಳಿ ಬಾಳುವಿನಿಂದ (ಚಾಕು) ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇತ್ತಂಡಗಳ ಇತರ ಒಟ್ಟು ಐವರು ಪುತ್ತೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ನಾಡುವಿನ ಸಮೀಪ ಸುಲ್ತಾನ್ ಸ್ಟೋರ್ ಬಳಿ ಪ್ರಕರಣ ನಡೆದಿದೆ. ಬಲ್ನಾಡು ಜನತಾ ಕಾಲೋನಿ ನಿವಾಸಿ ಸವಾದ್ ಅವರು ಕೋಳಿ ಬಾಳ್ನಿಂದ ಇರಿತಕ್ಕೆ ಒಳಗಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮನ್ಸೂರ್ (23), ಮುಸ್ತಾಫ (22), ಅಬ್ಬಾಸ್ (31), ಸೈಯದ್ (21) ಎಂಬವವರು ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬಲ್ನಾಡು ನಿವಾಸಿ ದಿನೇಶ್ (30) ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಲ್ನಾಡು ಸಮೀಪ ಪ್ರತಿ ಭಾನುವಾರ ಲಾಕ್ಡೌನ್ ಲೆಕ್ಕಿಸದೆ ಕ್ರಿಕೆಟ್ ಆಡಲಾಗುತ್ತಿತ್ತು. ಜು.12ರ ಭಾನುವಾರದಂದು ಅಲ್ಲಿ ಒಂದು ಸಮುದಾಯಕ್ಕೆ ಸೇರಿದ ಯುವಕರು ಕ್ರಿಕೆಟ್ ಆಡುತಿದ್ದರು ಎನ್ನಲಾಗಿದೆ. ಸಂಜೆ ವೇಳೆ ಮತ್ತೊಂದು ಸಮುದಾಯಕ್ಕೆ ಸೇರಿದ ಯುವಕರ ತಂಡವೂ ಅಲ್ಲಿ ಕ್ರಿಕೆಟ್ ಆಡಲು ಬಂದಿದೆ. ಆಟದ ಮಧ್ಯೆ ಇತ್ತಂಡಗಳ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮೈದಾನದಲ್ಲಿ ನಡೆಯುತ್ತಿದ್ದ ಚಕಮಕಿ ತಾರಕಕ್ಕೇರಿದ ಕಾರಣ ಜಗಳ ಸ್ಥಳೀಯ ನಿವಾಸಿಗಳ ಗಮನಕ್ಕೂ ಬಂದಿದೆ. ಸ್ವಲ್ಪ ಸಮಯದ ಬಳಿಕ ಗಲಾಟೆ ತಹಬದಿಗೆ ಬಂದು ಎರಡು ತಂಡದ ಸದಸ್ಯರು ಅಲ್ಲಿಂದ ತೆರಳಿದ್ದರು ಎಂದು ತಿಳಿದುಬಂದಿದೆ.
ಮರುದಿನ ಜು.13ರಂದು ರಾತ್ರಿ ವೇಳೆ ಈ ಎರಡೂ ತಂಡಗಳ ಕೆಲ ಆಟಗಾರರ ಮಧ್ಯೆ ಹಾಗೂ ಅವರ ಪರವಾಗಿ ಸೇರಿದ ಎರಡು ತಂಡದ ಕೆಲ ಯುವಕರ ನಡುವೆ ಅಲ್ಲಿನ ಸುಲ್ತಾನ್ ಸ್ಟೋರ್ ಸಮೀಪ ವಾಗ್ವಾದ ನಡೆದಿದೆ. ಅದು ತಾರಕಕ್ಕೇರಿ ಹೊಡೆದಾಟಕ್ಕೆ ತಿರುಗಿದೆ. ಈ ಸಂದರ್ಭ ಕೋಳಿ ಬಾಳ್ ಬಳಸಿ ಸವಾದ್ ಎಂಬಾತನನ್ನು ಗಂಭೀರವಾಗಿ ಗಾಯಗೊಳಿಸಲಾಗಿದೆ ಎನ್ನಲಾಗಿದೆ.
ಮುಸ್ತಾಫ್ ತಂಡದ ಆರೋಪ :
ಜು.13ರಂದು ರಾತ್ರಿ ಮನೆಯ ಹತ್ತಿರದ ಸುಲ್ತಾನ್ ಸ್ಟೋರ್‌ಗೆ ಸೈಯದ್ ಮತ್ತು ಸವಾದ್ ಆಗಮಿಸುತ್ತಿದ್ದ ವೇಳೆ ಸುಮಾರು 25ಕ್ಕೂ ಅಧಿಕ ಮಂದಿಯ ತಂಡದಿಂದ ಹಲ್ಲೆ ನಡೆದಿದೆ. ಕುಟ್ಟಿ ಗಣೇಶ್ ಎಂಬವರು ಸವಾದ್‌ಗೆ ಕೋಳಿ ಬಾಳ್ನಿಂದ ತಿವಿದಿದ್ದಾರೆ. ಸೈಯದ್ ಎಂಬಾತನಿಗೆ ದಿನೇಶ್ ಎಂಬಾತ ಹಲ್ಲೆ ನಡೆಸಿದ್ದಾನೆ. ಗಲಾಟೆಯನ್ನು ಬಿಡಿಸಲು ಬಂದ ಅಬ್ಬಾಸ್ ಎಂಬಾತನಿಗೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಸ್ತಾಫ್ ಆರೋಪಿಸಿದ್ದಾನೆ. ಅದೇ ದಾರಿಯಲ್ಲಿ ತೆರಳುತ್ತಿದ್ದ ಮನ್ಸೂರ್ ಮತ್ತು ನಾನು ಗಲಾಟೆ ನಡೆಯುತ್ತಿರುವುದನ್ನು ಗಮನಿಸಿ ವಿಚಾರಿಸಲು ಹೋದಾಗ ನಮಗಿಬ್ಬರಿಗೂ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕುಟ್ಟಿಬಾಲ, ಯಕ್ಷಿತ್, ಪಟ್ಟೆ ಬಾಲ, ವಿಜಿತ್, ಮ್ಯಾಕ್ಸಿ, ಮನೀಶ್, ಭರತ್, ರೂಪೇಶ್ ಸೇರಿ ಸುಮಾರು 25ಕ್ಕೂ ಅಧಿಕ ಮಂದಿಯ ತಂಡ ಹಲ್ಲೆಯಲ್ಲಿ ಭಾಗಿಯಾಗಿತ್ತು ಎಂದು ಮುಸ್ತಾಪ ಆರೋಪಿಸಿದ್ದಾರೆ. ಈ ತಂಡದ ಮನ್ಸೂರ್, ಮುಸ್ತಾಫ, ಅಬ್ಬಾಸ್ ಹಾಗೂ ಸೈಯದ್ ಪುತ್ತೂರು ಧ್ವನಂತರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದಿನೇಶ್ ತಂಡದ ಆರೋಪ :
ಬಲ್ನಾಡಿನ ಆಟದ ಮೈದಾನದಲ್ಲಿ ನಿಂತಿದ್ದ ವೇಳೆ, ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಸೈದು ಬಲ್ನಾಡು ಹಾಗೂ ನನಗೆ ಮಾತಿಗೆ ಮಾತು ಬೆಳೆದಿದ್ದು, ಅದರೆ ಅದು ಅಲ್ಲಿಯೇ ರಾಜಿಯಲ್ಲಿ ಇತ್ಯರ್ಥಗೊಂಡಿತ್ತು. ಜು. 13ರಂದು ನಾನು ಸುಲ್ತಾನ್ ಸೆಂಟರ್‌ಗೆ ಹೋಗಿದ್ದ ವೇಳೆ ಜಾಬೀರ್ ಅವರು ಯೋಗೀಶ್ ಎಂಬವರಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ 30ಕ್ಕೂ ಅಧಿಕ ಮಂದಿಯ ತಂಡ ವಿಕೆಟ್ ಹಾಗೂ ರಾಡ್‌ಗಳನ್ನು ಹಿಡಿದುಕೊಂಡು ನನ್ನ ಹಾಗೂ ಯೋಗಿಶ್ ಮೇಲೆ ದಾಳಿ ನಡೆಸಿದ್ದಾರೆ. ಬಳಿಕ ಪರಾರಿಯಾಗಿದ್ದಾರೆ ಎಂದು ದಿನೇಶ್ ಆರೋಪಿಸಿದ್ದಾರೆ. ದಿನೇಶ್ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.