ಮಂಗಳೂರು: ದ.ಕ. ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪಿಯನ್ನು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮೂಡಬಿದಿರೆಯ ತೆಂಕಮಿಜಾರು ನಿವಾಸಿ ರಂಜಿತ್(25) ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಡಿಸಿಗೆ ಕೊಲೆ ಬೆದರಿಕೆ ಒಡ್ಡಿರುವ ಕಿಡಿಗೇಡಿ ರಂಜಿತ್ನನ್ನು ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಅಕ್ರಮ ಗೋ ಸಾಗಣೆ ಮಾಡುವವರ ಮೇಲೆ ಹಲ್ಲೆ ನಡೆಸುವವರು ಹಾಗೂ ವಾಹನ ಜಖಂ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜು.27ರಂದು ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಎಚ್ಚರಿಕೆ ನೀಡಿದ್ದರು. ಡಿಸಿ ಎಚ್ಚರಿಕೆ ಬೆನ್ನಲ್ಲೇ ಸಿಂಧೂ ಬಿ.ರೂಪೇಶ್ಗೆ ವಾಟ್ಸ್ಆ್ಯಪ್ ಗ್ರೂಪ್ ಒಂದರಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಆರೋಪಿ ರಂಜಿತ್ ಜಿಲ್ಲಾಧಿಕಾರಿಯನ್ನೇ ಮೊದಲು ಕಡಿದು ಕೊಲ್ಲಬೇಕು ಎಂದು ಅಹಿತಕರ ಹೇಳಿಕೆ ನೀಡಿದ್ದ.
ಈ ಬಗ್ಗೆ ಜಿಲ್ಲಾಧಿಕಾರಿಯವರು ದೂರ ದಾಖಲಿಸದಿದ್ದರೂ, ಪೊಲೀಸರೇ ಸ್ವಯಂ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೀಗ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.