ಮಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಖಾಸಗಿ ಶಾಲೆಗಳ ಪ್ರಾಧ್ಯಾಪಕರು ಸಂಬಳವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ತಕ್ಷಣ ರಾಜ್ಯ ಸರ್ಕಾರ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಹೇಳಿದರು.
ಸರ್ಕಾರಿ ಶಾಲಾ, ಕಾಲೇಜಿನ ಪ್ರಾಧ್ಯಾಪಕರಿಗೆ ಇಂದಲ್ಲ, ನಾಳೆ ಸಂಬಳ ದೊರಕಬಹುದು. ಆದರೆ ಖಾಸಗಿ ಶಾಲೆಗಳ ಶಿಕ್ಷಕರು ಈ ಸಂಬಳವನ್ನೇ ನಂಬಿ ಬದುಕುತ್ತಿದ್ದಾರೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕೂಡಾ ವಿದ್ಯಾರ್ಥಿಗಳ ಫೀಸ್ ದೊರಕದೆ ಪ್ರಾಧ್ಯಾಪಕರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿವೆ. ಆದರೆ ಪ್ರಾಧ್ಯಾಪಕರ ಸಂಬಳದ ಶೇ.50ರಷ್ಟನ್ನಾದರೂ ನೀಡಿದ್ದಲ್ಲಿ ಅವರು ಕನಿಷ್ಠ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಅಲ್ಲದೆ ಸಾರ್ವಜನಿಕರೂ ಇಂತಹ ಪ್ರಾಧ್ಯಾಪಕರಿಗೆ ಸಹಾಯ ಮಾಡಲು ಮುಂದೆ ಬರಬೇಕಾಗಿದೆ ಎಂದು ಹೇಳಿದರು.
'ಸೈನಿಕರ ಮೊಬೈಲ್ ಅಪ್ಲಿಕೇಶನ್ಗಳಿಗೆ ನಿರ್ಬಂಧ ಖಂಡನೀಯ'
ಹನಿಟ್ರ್ಯಾಪ್ ಒಳಗಾಗುತ್ತಾರೆ ಎಂಬ ಕಾರಣಕ್ಕೆ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾ ಅಧಿಕಾರಿಗಳು ಹಾಗೂ ಸೈನಿಕರು ಬಳಸುವ 80 ಅಪ್ಲಿಕೇಶನ್‌ಗಳನ್ನು ಜುಲೈ 15ರೊಳಗೆ ರದ್ದು ಮಾಡಲು ಆದೇಶ ಮಾಡಲಾಗಿದೆ. ಆದರೆ ದೇಶದ ಬಗ್ಗೆ, ಸೈನಿಕರ ಬಗ್ಗೆ ಮಾತನಾಡುವವರು ಅವರು ಹನಿಟ್ರ್ಯಾಪ್ ಗೊಳಗಾಗುತ್ತಾರೆ ಎಂದು ಹೇಳುವವರಿಗೆ ಸೈನಿಕರ ಬಗ್ಗೆ ನಿಜವಾದ ಗೌರವ, ಕಾಳಜಿ ಇದೆಯಾ? ಎಂದು ತಿಳಿದು ಬರುತ್ತದೆ. ಸೈನಿಕರ ಬಗ್ಗೆ ಈ ರೀತಿಯಲ್ಲಿ ಹೇಳಿದ ಮಾತನ್ನು ತಕ್ಷಣ ಹಿಂದಕ್ಕೆ ತೆಗೆದುಕೊಳ್ಳಲಿ ಎಂದು ಅಭಿಷೇಕ್ ಉಳ್ಳಾಲ್ ಹೇಳಿದರು.
ಈಗ ಬ್ಯಾನ್ ಮಾಡಿರುವ ಕೇವಲ 80 ಮೊಬೈಲ್ ಅಪ್ಲಿಕೇಶನ್ಗಳಿಂದ ಮಾತ್ರ ಹನಿಟ್ರ್ಯಾಪ್ಗೆ ಮಾಡಲಾಗುವುದಾ? ಫೋನ್ ಕಾಲ್ಗಳು, ಮೆಸೇಜ್ ಮೂಲಕ ಹನಿಟ್ರ್ಯಾಪ್ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ಗಡಿ ಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಸೈನಿಕರು ವಿಡಿಯೋ ಮಾಡಿ ವೈರಲ್ ಮಾಡುತ್ತಾರೆ. ಈ ಮೂಲಕ ಎಲ್ಲರಿಗೂ ಸತ್ಯ ಸಂಗತಿ ತಿಳಿಯುತ್ತದೆ ಎಂಬ ದುರುದ್ದೇಶದಿಂದ ಈ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಲು ಹೊರಟಿದ್ದಾರೆ. ಈ ತೀರ್ಮಾನವನ್ನು ಆದಷ್ಟು ಶೀಘ್ರದಲ್ಲಿ ಹಿಂದಕ್ಕೆ ತೆಗೆದುಕೊಳ್ಳಲಿ ಎಂದು ಅವರು ಆಗ್ರಹಿಸಿದರು.