ಮಂಗಳೂರು: ನಗರದಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಜನರ ಕಣ್ಣಿಗೆ ಮಣ್ಣೆರಚುವ ರಾಜಕೀಯ ಸಭೆ. ಇದರಿಂದ ರಾಜ್ಯದ, ಜಿಲ್ಲೆಯ ಜನತೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟೀಕರಣ ನೀಡಲಿ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮಾಡಿ ರಾಜ್ಯದ ಹಾಗೂ ಜಿಲ್ಲೆಯ ಜನತೆಗೆ ಏನು ಕೊಡುಗೆ ಕೊಡಲಾಗಿದೆ. ಬಿಜೆಪಿಯ ಒಳ ರಾಜಕೀಯದ ಚರ್ಚೆ ಮಾಡುವ ಉದ್ದೇಶಕ್ಕೆ ಮಂಗಳೂರಿನಲ್ಲಿ ಸಭೆ ನಡೆಸುವ ಅಗತ್ಯವಿತ್ತೇ. ರಾಜ್ಯದಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕೊಡುವ ಯಾವುದೇ ವಿಷಯಗಳು ಅಲ್ಲಿ ಚರ್ಚೆಯಾಗಿಲ್ಲ. ಈ ಮೂಲಕ ಬಿಜೆಪಿ ರಾಜ್ಯದ ಹಾಗೂ ಜಿಲ್ಲೆಯ ಜನತೆಗೆ ಮೋಸ ಮಾಡಿದೆ ಎಂದು ದೂರಿದರು.
ಜನರಿಗೆ ಅಗತ್ಯವಿರುವ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತಿತರ ವಿಚಾರಗಳ ಬಗ್ಗೆ ಸ್ಪಷ್ಟ ನಿಯಮ ಸರ್ಕಾರದಿಂದ ಬರಬೇಕಿತ್ತು. ಎಲ್ಲರೂ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ದೊಡ್ಡ ಮಟ್ಟದ ಕೊಡುಗೆ ಲಭ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಭಾವನಾತ್ಮಕವಾಗಿ ಬಲೆ ಬೀಸಿ ಸಮಸ್ಯೆಗಳನ್ನು ಸೃಷ್ಟಿ ಮಾಡಲು ನೋಡುತ್ತಿದ್ದಾರೆಯೇ ವಿನಾ ಜನರಿಗೆ ಬೇಕಾಗುವ ಯಾವುದೇ ಯೋಜನೆಗಳಿಲ್ಲ. ಬಿಜೆಪಿಗರ ಎಲ್ಲಾ ಅಸ್ತ್ರಗಳು ಖಾಲಿಯಾಗಿವೆ. ಅದರಿಂದಾಗಿ ಈ ರೀತಿಯಲ್ಲಿ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ಗ್ರಾಪಂ ಚುನಾವಣೆಯಲ್ಲಿ ಜನತೆ ಸೂಕ್ತವಾದ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಪೂರ್ವ ಯೋಜನೆಯಿಲ್ಲದೆ ಪಟಾಕಿ ನಿಷೇಧ:
ರಾಜ್ಯ ಸರ್ಕಾರ ಪೂರ್ವ ಯೋಜನೆಯಿಲ್ಲದೆ ರಾಜ್ಯಾದ್ಯಂತ ಪಟಾಕಿ ನಿಷೇಧ ಮಾಡಿದೆ. ಏಕಾಏಕಿ ದೀಪಾವಳಿಗೆ ಪಟಾಕಿ ನಿಷೇಧ ಮಾಡಲಾಗಿದೆ ಎಂದಲ್ಲಿ ಒಂದು ವರ್ಷ ಯಾಕೆ ಈ ಬಗ್ಗೆ ಮೌನ ವಹಿಸಿದ್ದು. ದೀಪಾವಳಿ ಬಂದಾಗ ಮಾತ್ರ ಪಟಾಕಿ ನಿಷೇಧ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ, ಚುನಾವಣೆ ಸಂದರ್ಭದಲ್ಲಿ ಯಾಕೆ ಪಟಾಕೆ ನಿಷೇಧವಿಲ್ಲ ಎಂದು ಖಾದರ್ ಪ್ರಶ್ನಿಸಿದರು.