ಕಡಬ: ತಾಲೂಕಿನ ಪಾಲ್ತಾಡಿ, ಬಂಬಿಲ, ಚೆನ್ನಾವರ ಪ್ರದೇಶದಲ್ಲಿ ಮತ್ತೊಂದು ಚಿರತೆ ಓಡಾಡುತ್ತಿದ್ದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಊರಿಗೆ ಬಂದು ಕೋಳಿಯನ್ನು ಹಿಡಿದು ತಿನ್ನುತ್ತಿದ್ದ ಚಿರತೆ ಕಂಡು ಜನ ಜನ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಚಿರತೆಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೆಲ ತಿಂಗಳ ಹಿಂದೆ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪ್ರದೇಶದಲ್ಲಿ ಹಾಗೂ ಪಾಲ್ತಾಡಿ ಗ್ರಾಮದ ಬಂಬಿಲ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ಸುದ್ದಿಯಾಗಿತ್ತು. ನಿನ್ನೆ ಪುತ್ತೂರು ತಾಲೂಕಿನ ಸರ್ವೆ, ಎಲಿಯ ಪ್ರದೇಶದಲ್ಲೂ ಜನರ ಕಣ್ಣಿಗೆ ಬಿದ್ದಿತ್ತು. ಇದೀಗ ಮತ್ತೆ ಇದೇ ಪ್ರದೇಶದಲ್ಲಿ ಚಿರತೆ ಕಾಣಿಸಿದ್ದು ಆತಂಕ ಹೆಚ್ಚಿಸಿದೆ.
ಡಿ.27 ರಂದು ರಾತ್ರಿ ಚುನಾವಣಾ ಕಾರ್ಯ ಮುಗಿಸಿ ಪಕ್ಷವೊಂದರ ಕಾರ್ಯಕರ್ತರು ಮನೆಗೆ ಹೋಗುವ ಸಮಯದಲ್ಲಿ ಸುಮಾರು 9.30 ರ ವೇಳೆಗೆ ಬಂಬಿಲ ನಾಡೋಳಿ ಸೇತುವೆ ಬಳಿ ಚಿರತೆ ಕಾಣಿಸಿಕೊಂಡಿತ್ತು. ಡಿ.28ರಂದು ಬೆಳಿಗ್ಗೆ ಕೂಡ ಬಂಬಿಲ ಆದಿಮೊಗೇರ್ಕಳ ದೇವಸ್ಥಾನದ ಬಳಿಯ ಮುಖ್ಯ ರಸ್ತೆಯಲ್ಲಿ ವಾಕಿಂಗ್ ಹೋಗುವವರ ಕಣ್ಣಿಗೂ ಚಿರತೆ ಬಿದ್ದಿತ್ತು.
ಡಿ.28ರಂದು ರಾತ್ರಿ ವೇಳೆ ಚೆನ್ನಾವರ ಉಳ್ಳಾಕುಲು ದೇವಾಲಯದ ಬಳಿಯೂ ಚಿರತೆ ಓಡಾಡುತ್ತಿದ್ದದ್ದು ಕಂಡು ಬಂದಿದೆ. ನೆಲ್ಯಾಜೆ ವಿಶ್ವನಾಥ ರೈ ಅವರ ಮನೆಯ ಮುಂದಿದ್ದ ಕೋಳಿಯನ್ನು ಹಿಡಿದು ತಿಂದಿದೆ. ಬಳಿಕ ಮನೆಯ ಒಳಗಿನಿಂದ ಪಟಾಕಿ ಸಿಡಿಸಿದಾಗ ಚಿರತೆ ಓಡಿಹೋಗಿದೆ. ಹೀಗಾಗಿ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಮುಂದಾಗುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಓದಿ: ಶ್ವೇತಭವನದ ಡಿಜಿಟಲ್ ಟೀಂನಲ್ಲಿ ಉನ್ನತ ಹುದ್ದೆ ಪಡೆದ ಭಾರತ ಮೂಲದ ಆಯಿಷಾ ಶಾ